Home Mangalorean News Kannada News ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 14 ನೇ ವಾರದಲ್ಲಿ ಜರುಗಿದ 10 ಕಾರ್ಯಕ್ರಮಗಳ ವರದಿ

ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 14 ನೇ ವಾರದಲ್ಲಿ ಜರುಗಿದ 10 ಕಾರ್ಯಕ್ರಮಗಳ ವರದಿ

Spread the love

ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 14 ನೇ ವಾರದಲ್ಲಿ ಜರುಗಿದ 10 ಕಾರ್ಯಕ್ರಮಗಳ ವರದಿ

164) ಆಕಾಶಭವನ: ಸ್ವಚ್ಛಕಾವೂರು ತಂಡದವರು ಹಿಂದೂ ಯುವಸೇನಾ ತಂಡದ ಸದಸ್ಯರ ಸಹಕಾರದಲ್ಲಿ  ಇಂದು ನಂದನಪುರ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡರು. ಮಾಜಿ ಸಚಿವ ಶ್ರೀ ಜೆ ಕೃಷ್ಣ ಪಾಲೆಮಾರ್ ಹಾಗೂ ಪೋಲೀಸ್ ಅಧಿಕಾರಿ ಶ್ರೀ ಮದನ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಕಾರ್ಯಕರ್ತರು ಮೊದಲಿಗೆ ನಂದನಪುರ ಮುಖ್ಯ ರಸ್ತೆಯನ್ನು ಶುಚಿಗೊಳಿಸಿದರು. ಹಿಂದೂಯುವ ಸೇನೆಯ ಸದಸ್ಯರು ಬಸ್ ತಂಗುದಾಣವನ್ನು ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿದರು. ನುರಿತ ಕಲಾವಿದರಿಂದ ರಸ್ತೆಯ ಮಾರ್ಗಸೂಚಕ ಫಲಕವನ್ನು ಹೊಸದಾಗಿ ಬರೆಯಿಸಿ, ಜಾಗೃತಿಗಾಗಿ ಸ್ವಚ್ಛ ಭಾರತದ ಕಲಾಕೃತಿಯನ್ನು ರಚಿಸಲಾಗಿದೆ. ಶ್ರೀ ಕೊರಗಪ್ಪ ಶೆಟ್ಟಿ, ಶ್ರೀಸಂದೇಶ್  ಸೇರಿದಂತೆ ಸುಮಾರು ನೂರು ಜನ ಶ್ರಮದಾನಗೈದರು. ಶ್ರೀ ಸುಧಾಕರ್ ಕಾವೂರು ಹಾಗೂ ಸಚಿನ್ ಕಾವೂರು ಕಾರ್ಯಕ್ರಮವನ್ನು ಸಂಯೋಜಿಸಿದರು.

165) ಕೊಟ್ಟಾರ ಚೌಕಿ: ರಾಮಕೃಷ್ಣ ಮಿಷನ್ನಿನಿಂದ ಪ್ರೇರಿತಗೊಂಡ ಕಿರಣ ಜಿಮ್ ಫ್ರೇಂಡ್ಸ್ ಇಂದು ಕೊಟ್ಟಾರ ಚೌಕಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ನಗರದ ಮುಖ್ಯದ್ವಾರದಂತಿರುವ ಕೊಟ್ಟಾರ ಚೌಕಿಯಲ್ಲಿರುವ ಮೇಲ್ಸೇತುವೆಯ ಕಂಬಗಳನ್ನು ಅಂದಗೊಳಿಸುವ ಕಾರ್ಯ ಕಳೆದೆರಡು ತಿಂಗಳಿನಿಂದ ಸಾಗಿದೆ. ಈ ಬಾರಿ ಶ್ರೀಯಶವಂತ ಆಚಾರ್ಯ ಕಲ್ಪನೆಯಲ್ಲಿ  ಮೂರು ಕಂಬಗಳನ್ನು ಸ್ವಚ್ಛಗೊಳಿಸಿ ಮನಮುಟ್ಟುವ ಸಂದೇಶ ಹಾಗೂ ಕಣ್ಸೆಳೆಯುವ ಕಲಾಕೃತಿಗಳನ್ನು ರಚಿಸಲಾಗಿದೆ. ರಿತೇಶ್, ಧನ್ವೀರ್, ಮಂಜುನಾಥ್ ಸೇರಿದಂತೆ ಸುಮಾರು 60 ಯುವಕರು ಕೊಟ್ಟಾರ ಚೌಕಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು. ಗೂಡಂಗಡಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಟ್ಟು ಸ್ವಚ್ಛತೆಯನ್ನು ಕಾಪಾಡುವಂತೆ ವರ್ತಕರಲ್ಲಿ ಮನವಿ ಮಾಡಿದರು. ವರ್ತಕರಾದ ಶ್ರೀ ಗೋಪಾಲ ಪೂಜಾರಿ ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಧನಸಹಾಯ ಮಾಡಿ ಶುಭಹಾರೈಸಿದರು.

166) ಗಣಪತಿ ಹೈಸ್ಕೂಲ್ ರಸ್ತೆ: ಶ್ರೀ ಸಾರಸ್ವತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅವರ ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಳೆದ ಹತ್ತು ವಾರಗಳಿಂದ ಸತತವಾಗಿ ಹತ್ತು ಸ್ವಚ್ಛತಾ ಅಭಿಯಾನಗಳನ್ನು ಯಶಸ್ವಿಯಾಗಿ ಪೂರೈಸಿದ ಶ್ರೀ ಸಾರಸ್ವತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಕರ್ಣಾಟಕ ಬ್ಯಾಂಕಿನ ಶ್ರೀ ಶ್ರೀನಿವಾಸ್ ದೇಶಪಾಂಡೆ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸ್ವಚ್ಛತೆಯ ಲಾಭಗಳ ಕುರಿತು ಮಾತನಾಡಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ರಾಮಚಂದ್ರ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀ ಮಹೇಶ್ ಬೊಂಡಾಲ್ ಪ್ರಸ್ತಾಪಿಸಿದರು. ಸಂಸ್ಥೆಯ ಪ್ರಾಚಾರ್ಯ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

167) ಸೇಂಟ್ ಅಲೋಶಿಯಸ್ ಕಾಲೇಜು: ಕೋರ್ಟ್ ರಸ್ತೆಯಲ್ಲಿ ಸೇಂಟ್ ಅಲೋಶಿಯಸ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಸಹಾಯ ತಂಡದಿಂದ ಶ್ರಮದಾನ ನಡೆಯಿತು. ಪ್ರಾಧ್ಯಾಪಕ ಶ್ರೀ ಚಂದ್ರಶೇಖರ್ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಎನ್ ಎಸ್ ಎಸ್ ಸಂಯೋಜಕರಾದ ಶ್ರೀಮತಿ ಪ್ರೇಮಲತಾ ಶೆಟ್ಟಿ ಹಾಗೂ ಶ್ರೀ ಅರ್ಜುನ್ ಮಾರ್ಗದರ್ಶನದಲ್ಲಿ ಕೋರ್ಟ್ ರಸ್ತೆಯಿಂದ ಕರಂಗಲಪಾಡಿಯ ವರೆಗೆ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ಪ್ರಾಧ್ಯಾಪಕರಾದ ಶ್ರೀಮತಿ ನಂದಿನಿ ಶೇಟ್ ಹಾಗೂ ಪ್ರಶೋಭ ಸೇರಿದಂತೆ ಸುಮಾರು 85 ಜನ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.

168) ಕುಂಟಿಕಾನ ಜಂಕ್ಷನ್: ಕೊಂಚಾಡಿ ಗೆಳೆಯರ ಬಳಗದಿಂದ ಕುಂಟಿಕಾನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ರತ್ನಾಕರ ಬಿ ಹಾಗೂ ಶ್ರೀಮತಿ ದುರ್ಗಾಲತಾ ಹಸಿರು ನಿಶಾನೆ ತೋರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂಟಿಕಾನ ಮೇಲ್ಸೇತುವೆಯ ಕಂಬಗಳ ಪೋಸ್ಟರ್ ಕಿತ್ತು ಸ್ವಚ್ಛ ಮಾಡಿದರು, ನಂತರ ಅಕ್ಕಪಕ್ಕದ ಜಾಗೆಗಳನ್ನು ಸಮಾಂತರ ಮಾಡಿ ಸ್ವಚ್ಛಗೊಳಿಸಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಯಿತು. ಶ್ರೀ ಆನಂದ ಕೊಂಚಾಡಿ, ಶ್ರೀ ಅಶ್ವಥ್ ಕುಮಾರ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯ ಮಾಡಿದರು.

169) ಹಂಪಣಕಟ್ಟಾ: ಶ್ರೀ ಕೃಷ್ಣ ಭವನ ಆಟೋ ಚಾಲಕರು ಹಂಪಣಕಟ್ಟೆಯ ಮುಖ್ಯರಸ್ತೆ ಹಾಗೂ ಕ್ಲಾಕ್ ಟವರ್ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡರು. ಶ್ರೀ ಹರೀಶ್ ಕುತ್ತಾರ್ ಹಾಗೂ ಶ್ರೀ ಚಂದ್ರಯ್ಯ ಮರೋಳಿ ಅಭಿಯಾನಕ್ಕೆ ಚಾಲನೆ ನೀಡಿದರು.  ಟೋಕಿಯೋ ಮಾರ್ಕೆಟ್ ಎದುರಿಗಿನ ಜಾಗೆಯನ್ನು ಸ್ವಚ್ಛಗೊಳಿಸಿ ವಿಶ್ವವಿದ್ಯಾನಿಲಯದ ರಸ್ತೆಯಿಂದ ಕ್ಲಾಕ್ ಟವರ್ ಹಾಗೂ ತಾಲೂಕಾ ಪಂಚಾಯತ್ ಆವರಣವನ್ನು ಶುಚಿಗೊಳಿಸಿದರು.

170) ಚಿಲಿಂಬಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರು ಚಿಲಿಂಬಿಯಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀ ಸುಬ್ರಾಯ ನಾಯಕ ಹಾಗೂ ಶ್ರೀ ಪ್ರವೀಣ ನಾಯಕ್ ಅಭಿಯಾನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿಯರು ಚಿಲಿಂಬಿಯ ಮುಖ್ಯರಸ್ತೆಯ ಇಕ್ಕೆಲ ಹಾಗೂ ಮಾರ್ಗ ವಿಭಾಜಕಗಳನ್ನು ಸ್ವಚ್ಛ ಮಾಡಿದರು. ಶ್ರೀ ವಿಠಲದಾಸ್ ಪ್ರಭು ಹಾಗೂ ಶ್ರೀ ಮೆಹಬೂಬ್ ಅಭಿಯಾನ ಸಂಯೊಜಿಸಿದರು.

171) ದೇರಳಕಟ್ಟೆ: ಜಸ್ಟಿಸ್ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ದೇರಳಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ದೇರಳಕಟ್ಟೆ ಮುಖ್ಯ ರಸ್ತೆ ಹಾಗೂ ಕ್ಷೇಮ ಕ್ಯಾಂಪಸ್ ಸುತ್ತಮುತ್ತ ಮನೋವೈದ್ಯ ಡಾ. ಸತೀಶ್ ರಾವ್ ಮಾರ್ಗದರ್ಶನದಲ್ಲಿ ಸ್ವಚ್ಛತೆಯ ಕೈಂಕರ್ಯ ನಡೆಯಿತು.

172) ಶಿವಭಾಗ್: ಶಿವಭಾಗ್ ಮುಖ್ಯ ರಸ್ತೆಯಲ್ಲಿ ಸ್ಥಳೀಯ ನಾಗರಿಕರಿಂದ ಸ್ವಚ್ಛತಾ ಕಾರ್ಯ ನಡೆಯಿತು. ಶ್ರೀ ಸುಧಾ ರಾಜೇಂದ್ರ ಹಾಗೂ ಶ್ರೀ ಜಯಪ್ರಕಾಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಸತ್ಯನಾರಾಯಣ ಕೆ ವಿ ನೇತೃತ್ವದಲ್ಲಿ ಸ್ಥಳೀಯರು ಶಿವಭಾಗ್ ಮುಖ್ಯರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಶ್ರೀಮತಿ ಚಂದ್ರಕಲಾ ದೀಪಕ್ ಕಾರ್ಯಕ್ರವನ್ನು ಸಂಯೋಜಿಸಿದರು.

173) ಪಡೀಲ್: ಪಡೀಲ್ ಸಾರ್ವಜನಿಕರಿಂದ ಪಡೀಲ್ ಅಂಡರ್ ಪಾಸ್ ಹಾಗೂ ಸುತ್ತಮುತ್ತ ಸ್ವಚ್ಛತೆಯ ಕಾರ್ಯಕ್ರಮ ನಡೆಯಿತು. ರೈಲ್ವೇ ಸೇತುವೆಯ ಕೆಳಭಾಗದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಕಲ್ಲು ಮಣ್ಣುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಅಲ್ಲದೇ ರೈಲು ನಿಲ್ದಾಣಕ್ಕೆ ಸಾಗುವ ರಸ್ತೆಗಳನ್ನು ಶುಚಿಗೊಳಿಸಲಾಯಿತು.

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡವರಿಗೆಲ್ಲ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಈ ಅಭಿಯಾನಕ್ಕೆ  ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ. 164 ರಿಂದ 173 ರ ವರೆಗಿನ ಕಾರ್ಯಕ್ರಮಗಳ ಹತ್ತು ಕಾರ್ಯಕ್ರಮಗಳ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.

ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು ಅಭಿಯಾನ)


Spread the love

Exit mobile version