ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ದ ಕರ್ತವ್ಯಲೋಪದ ವಿರುದ್ಧ ಲೋಕಾಯುಕ್ತಕ್ಕೆ ದೂರು

Spread the love

ಸ್ವರ್ಣ ನದಿಯಲ್ಲಿ ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ದ ಕರ್ತವ್ಯಲೋಪದ ವಿರುದ್ಧ ಲೋಕಾಯುಕ್ತಕ್ಕೆ ದೂರು

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣ ನದಿಯಲ್ಲಿ ಲಾಕ್ಡೌನ್ನ ಮೂರು ತಿಂಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ಮೂಲಕ ಕೋಟ್ಯಾಂತರ ರೂ.ಅವ್ಯಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ನಗರಸಭಾ ಸದಸ್ಯ ರಮೇಶ್ ಕಾಂಚನ್ ತಿಳಿಸಿದ್ದಾರೆ.

ಅವರು ಗುರುವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಜೂ.16ರಂದು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಕಚೇರಿ ಯಲ್ಲಿ ಲೋಕಾಯುಕ್ತರಾದ ಜಸ್ಟೀಸ್ ಪಿ.ವಿಶ್ವನಾಥ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಅವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದು, ಈ ಬಹುಕೋಟಿ ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ದಾಖಲೆಗಳನ್ನು ಲೋಕಾಯುಕ್ತರಿಗೆ ನೀಡಿದ್ದು, ಮೇಲ್ನೋಟಕ್ಕೆ ಆಕ್ರಮ ನಡೆದಿರುವುದು ಕಂಡುಬಂದಿರುವುದನ್ನು ಮನಗಂಡ ಅವರು, ಈ ಬಗ್ಗೆ ತಕ್ಷಣ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳಿಂದ ವಿವರಣೆಯನ್ನೂ ಕೇಳಿದ್ದಾರೆ ಎಂದು ಹೇಳಿದರು. ಇವರೊಂದಿಗೆ ಲೋಕಾಯುಕ್ತ ಎಡಿಜಿಪಿ ಎ.ಎಸ್.ಎನ್.ಮೂರ್ತಿ ಹಾಗೂ ವಿಚಾರಣಾಧಿಕಾರಿ ಅವರನ್ನು ಸಹ ಭೇಟಿಯಾಗಿ ಮಾಹಿತಿ ಮತ್ತು ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿದರು.

ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣ ನದಿಯಲ್ಲಿ ಹೂಳು ತುಂಬಿದ ನೆಪದಲ್ಲಿ ನಗರಸಭೆಯು ಹೂಳೆತ್ತುವ ಬಗ್ಗೆ ಟೆಂಡರ್ ಕರೆದಿದ್ದು, ಇದನ್ನು ಸರಕಾರ ಜ.11ರಂದು ರದ್ದುಗೊಳಿಸಿತ್ತು. ಆದರೆ ಕೆಲ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳು ಪರಸ್ಪರ ಶಾಮೀಲಾಗಿ ಒಳಸಂಚು ನಡೆಸಿ, ಕೊರೋನ ಲಾಕ್ಡೌನ್ ಸಂದರ್ಭದ ದುರ್ಲಾಭ ಪಡೆಯುವ ಉದ್ದೇಶದಿಂದ ಹಿರಿಯಡ್ಕ ಬಳಿ ಸ್ವರ್ಣ ನದಿಗೆ ನಿರ್ಮಿಸಿರುವ ಬಜೆ ಅಣೆಕಟ್ಟಿನಿಂದ ಮಾಣೆಯವರೆಗೆ ಹಾಗೂ ಮಾಣೆಯಿಂದ ಶಿರೂರಿನವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ಸರಕಾರ ಹಾಗೂ ಜನತೆಗೆ ವಂಚಿಸಿದ್ದಾರೆ

ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಮರಳುಗಾರಿಕೆ ನಡೆಸಿದ ಅವರು ಕಾನೂನು ಉಲ್ಲಂಘಿಸಿದ್ದಲ್ಲದೇ, ಪೊಯ್ಯಗುಂಡಿ ಮರಳನ್ನು ಅಕ್ರಮವಾಗಿ ತೆಗೆದು ಉಡುಪಿ, ಬೊಮ್ಮರಬೆಟ್ಟು, ಮುಂಡಾಜೆ, ಸಾಲುಮರ, ನೂಜಿ, ಶಿರೂರು ಹಾಗೂ ಇತರ ಪ್ರದೇಶಗಳಲ್ಲಿ ಕಾಡಿನ ಮಧ್ಯೆ ದಾಸ್ತಾನು ಇರಿಸಿ, ಅವುಗಳಲ್ಲಿ ಸಾವಿರಾರು ಲೋಡ್ ಮರಳನ್ನು ಅಕ್ರಮ ಸಾಗಾಟ ನಡೆಸಿ 40 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಅವ್ಯವಹಾರದ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಮೌನವಾಗಿರುವುದು ಅವರು ಸಹ ಈ ಅವ್ಯವಹಾರಗಳಲ್ಲಿ ಶಾಮೀಲಾಗಿರುವ ಸಂದೇಹವನ್ನು ಮೂಡಿಸಿದೆ. ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿ, ಭ್ರಷ್ಟಾಚಾರದಲ್ಲಿ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ರಮೇಶ್ ಕಾಂಚನ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷ ಯತೀಶ್ ಕರ್ಕೇರ, ಉಡುಪಿ ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.


Spread the love