ಸ್ವಸಹಾಯ ಪಂಗಡಗಳ ಮೂಲಕ ಕ್ರೈಸ್ತ ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಲಿ- ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

Spread the love

ಸ್ವಸಹಾಯ ಪಂಗಡಗಳ ಮೂಲಕ ಕ್ರೈಸ್ತ ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಲಿ- ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ಕ್ರೈಸ್ತ ಮಹಿಳೆಯರು ತಮ್ಮ ಸರ್ವಾಂಗೀಣ ಅಭಿವೃದ್ಧಿ ಹೊಂದಲು, ಸ್ವಸಹಾಯ ಪಂಗಡಗಳಲ್ಲಿ ಸೇರಿಕೊಂಡು, ಅದರ ಲಾಭವನ್ನು ಪಡೆದುಕೊಂಡು ಕಥೊಲಿಕ್ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕರೆ ನೀಡಿದರು.

ಅವರು ಭಾನುವಾರ ಶಿರ್ವ ಡೊನ್ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕೆಥೊಲಿಕ್ ಸ್ತ್ರೀ ಸಂಘಟನೆ ಇದರ ಶಿರ್ವ ವಲಯ ವ್ಯಾಪ್ತಿಯ ಕಾಪು ತಾಲೂಕು ಮಟ್ಟದ ಇಂಚರ ಮಹಿಳಾ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಕ್ರೈಸ್ತ ಸಮುದಾಯದ ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವುದು ಸ್ತ್ರೀಸಂಘಟನೆಯ ಹತ್ತು ಉದ್ದೇಶಗಳಲ್ಲಿ ಒಂದಾಗಿದ್ದು ಆ ನಿಟ್ಟಿನಲ್ಲಿ ಉಡುಪಿ ಧರ್ಮಪ್ರಾಂತ್ಯ ಕಳೆದ ಐದು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಅದಕ್ಕೆ ಪೂರಕವಾಗಿ ಸ್ವಸಹಾಯ ಸಂಘಗಳ ರಚನೆ ನಡೆದಿದ್ದು, ಅದರಂತೆ ಚರ್ಚ್ ಹಂತದಿಂದ ಆರಂಭಿಸಿ ರಾಜ್ಯ ಮಟ್ಟದ ವರೆಗೂ ಸ್ವ-ಸಹಾಯ ಒಕ್ಕೂಟಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿದೆ.

ಸ್ವಸಹಾಯ ಸಂಘಗಳು ಮೂಲಕ ಧರ್ಮಪ್ರಾಂತ್ಯದ ಮಟ್ಟದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಸಬಲೀಕರಣ ಮಾಡುವುದು ಪ್ರಮುಖ ಗುರಿಯಾಗಿದೆ. ಮಹಿಳೆಯರೆ ಒಟ್ಟಾಗಿ ಸೇರಿ ಮಹಿಳಾ ಸಂಘಟನೆಯನ್ನು ಬಲಪಡಿಸಿದಾಗ ಮಾತ್ರ ನಿಜವಾದ ಸಬಲೀಕರಣ ಆಗಲು ಸಾಧ್ಯವಿದೆ. ಮಹಿಳೆ ಇಂದು ಕೇವಲ ಮನೆಯ ಗೋಡೆಯ ಒಳಗೆ ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲವಾದರೂ ಆರ್ಥಿಕವಾಗಿ ಸಬಲೀಕರಣಗೊಳ್ಳವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಪಂಗಡಗಳ ಮೂಲಕ ಸ್ವಾವಲಂಬಿ ಬದುಕು ರೂಪಿಸಲು ಸಹಕಾರಿಯಾಗುತ್ತವೆ.

ಇಂದು ಕ್ರೈಸ್ತ ಸಮುದಾಯದ ಮಹಿಳೆಯರು ಉಡುಪಿ ಧರ್ಮಪ್ರಾಂತ್ಯದಲ್ಲಿ ಮಂಚೂಣಿಯಲ್ಲಿದ್ದು ರಾಜಕೀಯ ಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ಬೀರಿದ್ದಾರೆ. ಗ್ರಾಮ ಪಂಚಾಯತ್ ಹಂತದಿಂದ ಜಿಲ್ಲಾಪಂಚಾಯತ್ ಹಂತದ ವರೆಗೆ 67 ಮಂದಿ ಕ್ರೈಸ್ತ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದಾರೆ. ರಾಜಕೀಯವಾಗಿ ಮಹಿಳೆಯರು ಮುಂದೆ ಬರುವುದರೊಂದಿಗೆ ಮಹಿಳಾ ಹಕ್ಕುಗಳ ಪರ ದನಿ ಎತ್ತುವ ಕೆಲಸವನ್ನು ಮಾಡಿದಾಗ ಮಹಿಳಾ ಸಬಲೀಕರಣಕ್ಕೆ ಒಂದು ಅರ್ಥ ಬರಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಆಧ್ಯಾತ್ಮಿಕ ನಿರ್ದೇಶಕ ವಂ|ರೆಜಿನಾಲ್ಡ್ ಡಿಸೋಜಾ, ಶಿರ್ವ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಡಾ|ರೋಕ್ ಡಿಸೋಜಾ, ಧರ್ಮಪ್ರಾಂತ್ಯದ ಸ್ತ್ರೀಸಂಘಟನೆಯ ಸಚೇತಕಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಅಧ್ಯಕ್ಷೆ ಜಾನೆಟ್ ಬಾರ್ಬೊಜಾ, ವಲಯ ಅಧ್ಯಕ್ಷೆ ಟ್ರೀಜಾ ಮಚಾದೊ, ಕಾರ್ಯದರ್ಶಿ ಸುನೀತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ವಿವೇಕಾನಂದ, ಹಿರಿಯ ಸಂಗೀತಗಾರ್ತಿ ಮೀನಾ ರೆಬಿಂಬಸ್ ಉಪಸ್ತಿತರಿದ್ದರು.


Spread the love