ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನ ನೀಡಿದವರನ್ನು ಸ್ಮರಿಸುವುದು ಸರಕಾರದ ಕರ್ತವ್ಯ- ಸೊರಕೆ
ಉಡುಪಿ : ನಾಡಿನ ಸ್ವಾತ್ರಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ದ ಹೋರಾಡಿ ರಾಷ್ಟ್ರಕ್ಕಾಗಿ ತಮ್ಮ ಜೀವವನ್ನು ಬಲಿದಾನ ನೀಡಿದ್ದು, ಇಂತಹ ಮಹನೀಯರನ್ನು ಸ್ಮರಿಸುವುದು ಎಲ್ಲಾ ಸರಕಾರಗಳ ಕರ್ತವ್ಯ ಎಂದು ಮಾಜಿ ಸಚಿವರು ಹಾಗೂ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಜರತಾ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ, ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶಾಂತಿ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ, ಭಾರತದ ಇತಿಹಾಸವೇ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯಕ್ಕೆ ಹೋರಾಡಿದವರ ಸಾಧನೆಗಳನ್ನು ನೆನಯುವುದು ಎಲ್ಲರ ಕರ್ತವ್ಯ , ಬ್ರಿಟೀಷರ ವಿರುದ್ದ ಹೋರಾಡಿ, ಜೀವವನ್ನು ಬಲಿದಾನ ನೀಡಿದ ಟಿಪ್ಪು ಸುಲ್ತಾನರ ಸಾಧನೆಯನ್ನು ನೆನೆಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ, ಟಿಪ್ಪು ತನ್ನ ಆಡಳಿತ ಅವಧಿಯಲ್ಲಿ ಮಸೀದಿಗಳು ಮತ್ತು ಮಂದಿರಗಳ ನಿರ್ರ್ಮಾಣಕ್ಕೆ ನೆರವು ನೀಡಿದ್ದಾರೆ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ಧರ್ಮಿಯರೂ ತಮ್ಮ ಬಲಿದಾನ ಮಾಡಿದ್ದಾರೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡದೇ, ಎಲ್ಲಾ ಧರ್ಮಿಯರೂ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಿಸಬೇಕಿದೆ, ಸೌಹಾರ್ದಯುತ ಸಾಮರಸ್ಯದಲ್ಲಿ ಬದುಕುವ ಸಮಾಜ ನಿರ್ಮಾಣ ಮಾಡಲೂ ಎಲ್ಲರೂ ಕೈಜೋಡಿಸಬೇಕು ಎಂದು ಸೊರಕೆ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ, ಟಿಪ್ಪು ಸುಲ್ತಾನ್ ಕುರಿತ ಕಿರುಪುಸ್ತಕವನ್ನು ಶಾಸಕ ವಿನಯ ಕುಮಾರ್ ಸೊರಕೆ ಬಿಡುಗಡೆಗೊಳಿಸಿದರು.
ಹಜರತ್ ಟಿಪ್ಪು ಸುಲ್ತಾನರ ವ್ಯಕ್ತಿತ್ವ ಮತ್ತು ಸಾಧನೆ ಬಗ್ಗೆ ಉಪನ್ಯಾಸ ನೀಡಿದ, ಎಂಐಟಿ ಮಣಿಪಾಲದ ಉಪನ್ಯಾಸಕ ಫಣಿರಾಜ್ ಮಾತನಾಡಿ, ಟಿಪ್ಪು 37 ವರ್ಷಗಳ ಕಾಲ ನೆಡಸಿದ ಆಡಳಿತವನ್ನು ರಾಜ್ಯದ ಜನತೆ ಇಂದಿಗೂ ನೆನಯುತ್ತಾರೆ, ಟಿಪ್ಪು ಕುರಿತು ಅನೇಕ ಲಾವಣಿಗಳು ರಚಿತವಾಗಿವೆ, ಕರ್ನಾಟಕದ ಅಭಿವೃದ್ದಿ ಪರ್ವ ಟಿಪ್ಪು ಆಡಳಿತಾವಧಿಯಿಂದಲೇ ಪ್ರಾರಂಭವಾಗಿದೆ, ಕಾವೇರಿಯಿಂದ ಗೋದಾವರಿ ವರೆಗೆ ಹರಡಿದ್ದ ಕರ್ನಾಟಕವನ್ನು ಬ್ರಿಟೀಷರಿಂದ ಕಾಪಾಡಿದ್ದ ಟಿಪ್ಪು, ರಾಜ್ಯದಲ್ಲಿ ಪಾಳೇಗಾರಿಕೆಯನ್ನು ರದ್ದುಪಡಿಸಿ, ಕೃಷಿ ಭೂಮಿಯನ್ನು ಗೇಣಿದಾರರಿಗೆ ನೀಡುವ ಮೂಲಕ ಭೂ ಸುಧಾರಣೆಯ ಹರಿಕಾರನಾಗಿದ್ದರು,ಅಲ್ಲದೆ ಗೇಣಿದಾರರಿಗೆ ಬಡ್ಡಿ ರಹಿತ ಸಾಲ ಹಾಗೂ ಕೃಷಿ ನೀರಾವರಿ ವ್ಯವಸ್ಥೆಗಾಗಿ ಕೆರೆಗಳು ಹಾಗೂ ಅಣೆಕಟ್ಟುಗಳನ್ನು ಕಟ್ಟಲು ಕಾರಣಕರ್ತರಾಗಿದ್ದು, ಕನ್ನಂಬಾಡಿ ಅಣೆಕಟ್ಟೆಗೆ ಶಿಲಾನ್ಯಾಸ ಮಾಡಿದ್ದರು ಎಂದು ಹೇಳಿದರು.
ಬ್ರಿಟೀಷರ ವಿರುದ್ದ ಹೋರಾಡಲು ಸಧೃಡ ಸೈನ್ಯದ ಕಟ್ಟುವ ಮೂಲಕ ಒಕ್ಕೂಟ ವ್ಯವಸ್ಥೆ ರಚನೆಗೆ ಮುಂದಾಗಿದ್ದ ಟಿಪ್ಪು, ಫ್ರೆಂಚ್ ಸೈನ್ಯದ ತಂತ್ರಗಾರಿಕೆಯನ್ನು ಪಡೆದು ರಾಕೆಟ್ ಗಳನ್ನು ಅಭಿವೃದ್ದಿಪಡಿಸಿದ್ದರು, ವೈಜ್ಞಾನಿಕ ರೀತಿಯಲ್ಲಿ ತೂಕ ಮತ್ತು ಅಳತೆ ವ್ಯವಸ್ಥೆ ಹಾಗೂ ಲೆಕ್ಕ ವ್ಯವಸ್ಥೆ ಪರಿಚಯಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ, ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದ್ದು, ಶ್ರೀಗಂಧದ ಕಾರ್ಖಾನೆ ಪ್ರಾರಂಭಿಸಿದ್ದ ಟಿಪ್ಪು, ಅಮೇರಿಕಾ ಮತ್ತು ಫ್ರೆಂಚ್ ಕ್ರಾಂತಿಯ ಬಗ್ಗೆ ಅರಿತಿದ್ದ ಟಿಪ್ಪುವಿನ, ಸೈನಿಕ ತಂತ್ರಜ್ಞಾನ ಮತ್ತು ವ್ಯಾಪಾರ ಕೌಶಲ್ಯಗಳ ಬಗ್ಗೆ ಬ್ರಿಟೀಷರಿಗೆ ಭಯವಿತ್ತು, ಆ ಕಾಲದಲ್ಲೇ ರಾಜ್ಯದ ಜನತೆಯ ತಲಾ ಆದಾಯ ಯೊರೋಪಿಯನ್ ರಾಷ್ಟಗಳಿಗಿಂತಲೂ ಅಧಿಕವಾಗಿತ್ತು, ತನ್ನನ್ನು ತಾನು ‘ಸಿಟಿಜನ್ ಟಿಪ್ಪು’ ಎಂದು ಕರೆದುಕೊಂಡಿದ್ದ ಟಿಪ್ಪು ಸುಲ್ತಾನ್ ನನ್ನು ಒಬ್ಬ ಮುಸಲ್ಮಾನ್ ಎಂಬ ದೃಷ್ಠಿಯಿಂದ ನೋಡದೇ ಒಬ್ಬ ಕನ್ನಡಿಗ ಎಂದ ದೃಷ್ಠಿಯಿಂದ ನೋಡಬೇಕಿದೆ, ಟಿಪ್ಪುವಿನ ಕುರಿತು ವಿವಾದಾತ್ಮಕ ವಿಷಯಗಳನ್ನು ಮುಂದೆ ತರುತ್ತಿರುವ ಕೆಲವರು ಅವನ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿಲ್ಲ ಎಂದು ಫಣಿರಾಜ್ ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಮಾತನಾಡಿ, ಧೀರ ಸೇನಾನಿ ಆಗಿದ್ದ ಟಿಪ್ಪು , ಬ್ರಿಟೀಷ್ ಆಕ್ರಮಣದ ವಿರುದ್ದ ಹೋರಾಡಿದವರು, ಅನೇಕ ದೇಗುಲಗಳಿಗೆ ಉದಾರವಾಗಿ ದಾನ ಧತ್ತಿಗಳನ್ನು ನೀಡಿದ್ದು, ಕ್ಷಿಪಣಿ ತಂತ್ರಜ್ಞಾನವನ್ನು ಪರಿಚಯಿಸಿದ್ದರು ಎಂದು ಹೇಳಿದರು.
ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಂ ಪಾಟೀಲ್, ಜಿಲ್ಲಾ ಪಂಚಾಯತ್ ಸಿಇಓ ಶಿವಾನಂದ ಕಾಪಶಿ , ಅಪರ ಜಿಲ್ಲಾಧಿಕಾರಿ ಅನುರಾಧ, ಪೌರಾಯಕ್ತ ಮಂಜುನಾಥಯ್ಯ , ಇಸ್ಮಾಯಿಲ್ ಆತ್ರಾಡಿ ಉಪಸ್ಥಿತರಿದ್ದರು. ದಫ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಎಸ್.ಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ ಸ್ವಾಗತಿಸಿದರು, ಗಣೇಶ್ ಕುಮಾರ್ ಗಂಗೊಳ್ಳಿ ನಿರೂಪಿಸಿದರು.