ಹಂದಿಗಿಟ್ಟ ವಿದ್ಯುತ್ ತಂತಿ ತುಳಿದು ಮಹಿಳೆ ಮೃತ್ಯು ಪ್ರಕರಣ: ನಾಲ್ವರು ಸೆರೆ
ಕಾರ್ಕಳ: ಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಸಚ್ಚರಿ ಪೇಟೆಯ ಗಿರಿಜಾ ಪೂಜಾರ್ತಿ (50) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಮುಂಡ್ಕೂರು ಗ್ರಾಮದ ಪೊಸ್ರಾಲ್ ನಿವಾಸಿ ಶಿವ ರಾಮ ಶೆಟ್ಟಿ(80) ಎಂಬವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವರಾಮ ಶೆಟ್ಟಿ ಸೇರಿದಂತೆ ಈಗಾಗಲೇ ಬಂಧಿತರಾಗಿರುವ ಮೂಡಬಿದ್ರೆ ಪುತ್ತಿಗೆ ಗ್ರಾಮದ ಜಾನ್ ಕ್ಲೋಡಿಯಸ್ (57), ಮುಂಡ್ಕೂರು ಅಲಂಗಾರು ಗುಡ್ಡೆಯ ಸುನೀಲ್ (30) ಹಾಗೂ ಮುಂಡ್ಕೂರು ಸಚ್ಚರಿಪೇಟೆಯ ಪದ್ಮನಾಭ ಸಾಲಿಯಾನ್ (42)ಎಂದು ಗುರುತಿಸಲಾಗಿದೆ. ಬಂಧಿತರನ್ನು ಪೊಲೀಸರು ಇಂದು ಕಾರ್ಕಳ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ತಂಡ ಆರೋಪಿ ಗಳನ್ನು ಸೆ.18ರಂದು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಬಂಧಿಸಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಕಾರುಗಳು, ಮೂರು ಮೊಬೈಲ್ ಹಾಗೂ 35 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.8ರಂದು ಹಂದಿ ಬೇಟೆ ಇಟ್ಟಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟ ಗಿರಿಜಾ ಪೂಜಾರ್ತಿಯ ಮೃತದೇಹವನ್ನು ಸಾಕ್ಷನಾಶ ಮಾಡುವ ಉದ್ದೇಶದಿಂದ ಆರೋಪಿಗಳು ಕಾಂತಾವರ ಗ್ರಾಮದ ಕಂಡಿಗ ಎಂಬಲ್ಲಿ ಎಸೆದು ಇಡೀ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಈ ಘಟನೆ ಸೆ.17ರಂದು ಬೆಳಕಿಗೆ ಬಂತೆನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.