ಹಕ್ಕು ಚಲಾವಣೆಯೊಂದಿಗೆ ಕರ್ತವ್ಯ ಪಾಲನೆಯೂ ಮುಖ್ಯ: ಭವಾನಿ
ಮ0ಗಳೂರು : ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ದೇಶದ ಪ್ರಗತಿಗಾಗಿ ಮೂಲಭೂತ ಕರ್ತವ್ಯಗಳನ್ನೂ ಪಾಲಿಸುವುದು ಅತಿಮುಖ್ಯವಾಗಿದೆ ಎಂದು ದ.ಕ. ಜಿಲ್ಲಾ 4ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎನ್.ವಿ.ಭವಾನಿ ತಿಳಿಸಿದ್ದಾರೆ.
ಅವರು ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ “ಮೂಲಭೂತ ಕರ್ತವ್ಯಗಳು” ಮತ್ತು “ಪೋಲಿಸ್ ದೂರು ಪ್ರಾಧಿಕಾರ” ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸಂವಿಧಾನ ಜಾರಿಗೆ ಬಂದಾಗ ಮೂಲಭೂತ ಕರ್ತವ್ಯಗಳು ಇರಲಿಲ್ಲ. ದೇಶದ ಪ್ರಗತಿಯಲ್ಲಿ ಪ್ರಜೆಗಳೂ ಭಾಗವಹಿಸುವಂತಾಗಲು 1976ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು. ನಾಗರೀಕರು ಹಕ್ಕುಗಳನ್ನು ಚಲಾಯಿಸಲು ತೋರಿಸುವಷ್ಟು ಆಸಕ್ತಿ ಕರ್ತವ್ಯಗಳ ಪಾಲನೆಯಲ್ಲಿ ತೋರಿಸುತ್ತಿಲ್ಲ. ಸಮಾಜದ ಸಮಸ್ಯೆಗಳು ನಮಗೆ ವೈಯಕ್ತಿಕವಾಗಿ ಬಾಧಿತವಾದಾಗಲಷ್ಟೇ ಸಮಾಜದ ಬಗ್ಗೆ ಚಿಂತಿಸುತ್ತಿರುವುದು ವಿಷಾಧಕರ ಎಂದು ಭವಾನಿ ಹೇಳಿದರು.
ಮೂಲಭೂತ ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಅನಂತಕೃಷ್ಣ ಭಟ್ ಮಾತನಾಡಿ, ಕರ್ತವ್ಯಗಳ ಪಾಲನೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಮೂಲಭೂತ ಕರ್ತವ್ಯಗಳನ್ನು ಅಂತ:ಕರಣದಿಂದಲೇ ಪಾಲಿಸಬೇಕು. ವಿಪತ್ತುಗಳ ಅಥವಾ ತುರ್ತು ಸಂದರ್ಭಗಳಲ್ಲಿ ಸೇವೆ ಮಾಡುವುದೂ ದೇಶಕ್ಕೆ ಸಲ್ಲಿಸುವ ಕೊಡುಗೆಯಾಗಿದೆ ಎಂದರು.
ಪೊಲೀಸ್ ದೂರು ಪ್ರಾಧಿಕಾರ ಕುರಿತು ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ವೆಲೆಂಟಿಯನ್ ಡಿಸೋಜಾ, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಎಸಿಪಿ ಕೆಳಗಿನ ರ್ಯಾಂಕಿನ ಅಧಿಕಾರಿಗಳ ಬಗ್ಗೆ ದೂರು ನೀಡಬಹುದಾಗಿದೆ. ಎಸಿಪಿಗಿಂತ ಮೇಲಿನ ಅಧಿಕಾರಿಗಳ ಬಗ್ಗೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಇದುವರೆಗೆ ದ.ಕ.ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ 30 ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ತಿಳಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಅವರು ಮಾತನಾಡಿ, ಮನುಷ್ಯನ ಸೃಷ್ಟಿಯ ಗರ್ಭಾವಸ್ಥೆಯಲ್ಲಿದ್ದಾಗಲೇ ಭ್ರೂಣ ಹತ್ಯೆ ನಿಷೇಧ ಕಾಯಿದೆ ಅನ್ವಯವಾಗುವುದರೊಂದಿಗೆ ಕಾನೂನು ಅದಕ್ಕೆ ವ್ಯಾಪಿಸುತ್ತದೆ. ಮುಂದೆ, ವ್ಯಕ್ತಿ ಕಲಿತು, ಬೆಳದು ತೀರಿಹೋದ ನಂತರವೂ ವಿವಿಧ ಹಂತಗಳಲ್ಲಿ ಕಾನೂನು ಅನ್ವಯವಾಗುತ್ತದೆ ಎಂದರು. ಮಂಗಳೂರು ವಕೀಲರ ಸಂಘವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಲು ಸಿದ್ಧವಿದೆ. ಈ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಹಾಗೂ ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಡಾ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿ, ವಿವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ವಂದಿಸಿದರು. ಉಪನ್ಯಾಸಕ ದಯಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.