ಹಜ್ಜ್ ಸೇವೆಗೆ ಐ.ಎಫ್.ಎಫ್ ಸಿದ್ಧತೆ

Spread the love

ಹಜ್ಜ್ ಸೇವೆಗೆ ಐ.ಎಫ್.ಎಫ್ ಸಿದ್ಧತೆ

ಸೌದಿ ಅರೇಬಿಯಾ-ಜಿದ್ದಾ: ಈ ಬಾರಿ ಹಜ್ಜ್ ಯಾತ್ರಿಗಳ ಸೇವೆಗೆಯ್ಯುವುದಕ್ಕಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ (ಐ.ಎಫ್.ಎಫ್) 800 ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಿದೆ. ಈ ಸ್ವಯಂ ಸೇವಕರು ವಿವಿಧ ರಾಜ್ಯಗಳಿಂದ ಬಂದ ಅನಿವಾಸಿ ಭಾರತೀಯರಾಗಿದ್ದಾರೆ. ಅವರು ಇಂಗ್ಲೀಷ್ ಮತ್ತು ಅರೇಬಿಕ್ ಹಾಗೂ ಇತರ ಸ್ಥಳೀಯ ಭಾಷೆಗಳನ್ನು ಬಲ್ಲವರಾಗಿದ್ದು, ಹಜ್ಜ್ ಯಾತ್ರಾತ್ರಿಗಳ ಸೇವೆಗೆಯ್ಯಲು ಇದು ಅವರಿಗೆ ನೆರವಾಗಲಿದೆ ಎಂದು ಶರಫೀಯಾದ ಇಂಫಾಲ ಗಾರ್ಡನ್ ನಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾದೇಶಿಕ ಅಧ್ಯಕ್ಷರಾದ ಶಂಸುದ್ದೀನ್ ಕೆ.ಎಂ  ತಿಳಿಸಿದ್ದಾರೆ.

iffj

ಮಕ್ಕಾ, ಅಝೀಝಿಯಾಗಳಲ್ಲಿರುವ ಹಜ್ಜ್ ಯಾತ್ರಾರ್ಥಿಗಳ ವಸತಿ ಪ್ರದೇಶ, ಹಜ್ಜ್ ಮಿಶನ್ ನ ವೈದ್ಯಕೀಯ ಸೌಕರ್ಯ, ಅರಫಾ ದ ಮಶಮೀರ್ ರೈಲು ನಿಲ್ದಾಣ, ಹಲವು ಔಷಧಾಲಯಗಳು ಹಾಗೂ ಮೀನಾದಲ್ಲಿ ಸ್ವಯಂ ಸೇವಕರು ಸೇವೆಗೆಯ್ಯಲಿದ್ದಾರೆ. ಹಜ್ಜ್ ಯಾತ್ರಾರ್ಥಿಗಳು ತಮ್ಮ ಸ್ಥಳಗಳಿಗೆ ತಲುಪಲು ಮತ್ತು ಅಗತ್ಯವಿದ್ದಾಗ ಔಷಧ ಹಾಗೂ ಗಾಲಿ ಕುರ್ಚಿಗಳನ್ನು ಪಡೆಯಲು ನೆರವಾಗಲಿದ್ದಾರೆ. ಸುಲಭ ಹಜ್ಜ್ ನಿರ್ವಹಣೆಗಾಗಿ ಅವರು ಆರೋಗ್ಯ ಹಾಗೂ ಸುರಕ್ಷಣಾ ಸಲಹೆಗಳನ್ನೂ ನೀಡಲಿದ್ದಾರೆ. ಸಂಪೂರ್ಣ ಕಾರ್ಯಾಚರಣೆಗಾಗಿ 5 ತಂಡಗಳಂತೆ ಸ್ವಯಂ ಸೇವಕರನ್ನು ವಿಭಾಗಿಸಲಾಗಿದೆ. ಮಕ್ಕಾ ತಂಡದಲ್ಲಿ 100 ಸ್ವಯಂ ಸೇವಕರು, ಅರಫಾ ತಂಡದಲ್ಲಿ 100, ಮೀನಾ ಟೆಂಟ್ ಸೇವಾ ತಂಡದಲ್ಲಿ 200 ಮತ್ತು ಮೀನಾ ದಲ್ಲಿ 350 ಸ್ವಯಂ ಸೇವಕರು ಸೇವೆಗೆಯ್ಯಲಿದ್ದಾರೆ. ಅಲ್ಲದೆ 50 ಮಂದಿ ಮೀನಾದ ವಿವಿಧ ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿ ಸೇವೆಗೆಯ್ಯಲಿದ್ದಾರೆ ಎಂದು ಹೇಳಿದರು.

ಹಜ್ಜ್ ಯಾತ್ರಾರ್ಥಿಗಳ ಮೊದಲ ತಂಡ ಇಲ್ಲಿಗೆ ತಲುಪುವುದರೊಂದಿಗೇ ಸ್ವಯಂ ಸೇವಕರು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಸ್ವಯಂ ಸೇವಕರು ಮಸ್ಜಿದುಲ್ ಹರಂ ಮತ್ತು ಆಝೀಝಿಯಾಗಳಲ್ಲಿ ಸೇವೆಗೆಯ್ಯುತ್ತಿದ್ದಾರೆ. ಮದೀನಾದಲ್ಲೂ ಸ್ವಯಂ ಸೇವಕರು ಹಜ್ಜ್ ಯಾತ್ರಾರ್ಥಿಗಳಿಗೆ ನೆರವಾಗುತ್ತಿದ್ದಾರೆ ಎಂದು ಸಂಶುದ್ದೀನ್ ತಿಳಿಸಿದರು.

ಹಜ್ಜ್ ಶಿಬಿರಗಳು: ಹಜ್ಜ್ ಯಾತ್ರಾರ್ಥಿಗಳು ದೇಶವನ್ನು ತೊರಯುವುದಕ್ಕಿಂತ ಮುಂಚೆಯೇ ಅವರಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ ತಮಿಳುನಾಡು, ಕರ್ನಾಟ ಮತ್ತು ಕೇರಳಗಳಲ್ಲಿ ಹಜ್ಜ್ ಶಿಬಿರಗಳನ್ನು ಏರ್ಪಡಿಸಿದ್ದು, ಈ ಶಿಬಿರಗಳಲ್ಲಿ ಹಜ್ಜ್ ಯಾತ್ರಾರ್ಥಿಗಳಿಗೆ ತಮ್ಮ ಮನೆಯಿಂದ ಇಳಿದು ಹೊರಡುವಲ್ಲಿಂದ ತೊಡಗಿ ಮರಳಿ ಮನೆ ತಲುಪುವ ತನಕದ ಎಲ್ಲಾ ವಿವರಗಳನ್ನು ನೀಡಲಾಗಿದ್ದು, ಶಿಬಿರದ ವಿವಿಧ ಸೆಶನ್ ಗಳಲ್ಲಿ ಹಜ್ಜ್ ನ ಸ್ಪೂರ್ತಿ, ಒಂದರ ನಂತರ ಒಂದರಂತೆ ಹಜ್ಜ್ ಕರ್ಮವನ್ನು ಪೂರ್ತಿಗೊಳಿಸಬೇಕು, ಹೇಗೆ ಆರೋಗ್ಯ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಮುಂತಾದ ಸಮಗ್ರ ಮಾಹಿತಿಗಳನ್ನು ನೀಡಲಾಗಿದೆ.

ಹಜ್ಜ್ ಯಾತ್ರಾರ್ಥಿಗಳಿಗಾಗಿ ನಕ್ಷೆ: ಭಾರತೀಯ ಹಜ್ಜ್ ಯಾತ್ರಾರ್ಥಿಗಳಿಗೆ ನೆರವಾಗುವುದಕ್ಕಾಗಿ ಮಕ್ಕಾ ಹಾಗೂ ಆಝೀಝಿಯಗಳಲ್ಲಿರುವ ಯಾತ್ರಾರ್ಥಿಗಳ ವಸತಿ ಪ್ರದೇಶವನ್ನೊಳಗೊಂಡ ಸಂಪೂರ್ಣ ನಕ್ಷೆಯೊಂದನ್ನು ಇಂಡಿಯಾ ಫ್ರೆಟರ್ನಿಟಿ ಫಾರಂ ಸಿದ್ದಪಡಿಸಿದೆ. ಮೀನಾದ ಟೆಂಟ್ ಸಿಟಿಯ ತಾಜಾ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಮೀನಾ ಟೆಂಟ್ ಲೊಕೇಟರ್ ಅ್ಯಪ್: ಕಳೆದ ವರ್ಷ ಇಂಡಿಯಾ ಫ್ರೆಟರ್ನಿಟಿ ಫಾರಂ ಮೀನಾ ದಲ್ಲಿ ಟೆಂಟ್ ಗಳನ್ನು ಪತ್ತೆ ಹಚ್ಚುವುದಕ್ಕಾಗಿ ಆ್ಯಂಡ್ರಾಯಿಡ್ ಆಧಾರಿತ ಆ್ಯಪ್(ಅಪ್ಲಿಕೇಶನ್) ಒಂದನ್ನು ಅಭಿವೃದ್ಧಿ ಪಡಿಸಿತ್ತು. ಈ ಬಾರಿ ಈ ಆ್ಯಪ್ ನ ಅಪ್ಟೇಟೆಡ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್ ಆಝೀಝಿಯಾ ವಸತಿ ಪ್ರದೇಶ ಮತ್ತು ಮೀನಾದ ಇಡೀ ಟೆಂಟ್ ಸಿಟಿಯನ್ನು ಒಳಗೊಳ್ಳಲಿದ್ದು, ಹಾಜಿಗಳಿಗೆ ತಮ್ಮ ಸ್ಥಳಗಳಿಗೆ ಅಥವಾ ವಸತಿ ಕಟ್ಟಡಗಳಿಗೆ ಸುಲಭವಾಗಿ ತಲುಪಲು ನೆರವಾಗಲಿದೆ.

ಮುದಸ್ಸಿರ್ (ಕೋ-ಆರ್ಡಿನೇಟರ್), ಫೈಝಲ್.ಟಿ (ಅಸಿಸ್ಟೆಂಟ್ ಕೋ-ಆರ್ಡಿನೇಟರ್), ಮುಜೀಬುರ್ರಹ್‍ಮಾನ್ (ಸ್ವಯಂ ಸೇವಕ ನಾಯಕ), ಇಸ್ಮಾಯಿಲ್ (ಸಹ ನಾಯಕ) ಇವರ ನೇತೃತ್ವದಲ್ಲಿ ಸಂಪೂರ್ಣ ಕಾರ್ಯಾಚರಣೆಯು ಸಂಯೋಜಿಸಲ್ಪಡಲಿದೆ.

ಶಂಸುದ್ದೀನ್ ಕೆ.ಎಂ (ಐ.ಎಫ್.ಎಫ್ ಪ್ರಾದೇಶಿಕ ಅಧ್ಯಕ್ಷ), ಮೊಹಮ್ಮದ್ ಅಲೀ.ಕೆ (ಪ್ರಾದೇಶಿಕ ಕಾರ್ಯದರ್ಶಿ), ಮುದಸ್ಸಿರ್ (ಹಜ್ಜ್ ಕೋ-ಆರ್ಡಿನೇಟರ್), ಫೈಝಲ್.ಟಿ (ಅಸಿಸ್ಟೆಂಟ್ ಕೋ-ಆರ್ಡಿನೇಟರ್) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love