Home Mangalorean News Kannada News ಹಫ್ತಾ ಹಣ ನೀಡುವಂತೆ ಬೇಡಿಕೆ : ಭೂಗತ ಪಾತಕಿ ಬನ್ನಂಜೆ ರಾಜನ 5 ಜನ ಸಹಚರರ...

ಹಫ್ತಾ ಹಣ ನೀಡುವಂತೆ ಬೇಡಿಕೆ : ಭೂಗತ ಪಾತಕಿ ಬನ್ನಂಜೆ ರಾಜನ 5 ಜನ ಸಹಚರರ ಬಂಧನ

Spread the love

ಹಫ್ತಾ ಹಣ ನೀಡುವಂತೆ ಬೇಡಿಕೆ : ಭೂಗತ ಪಾತಕಿ ಬನ್ನಂಜೆ ರಾಜನ 5 ಜನ ಸಹಚರರ ಬಂಧನ

ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜ ಹೆಸರಲ್ಲಿ ಉಡುಪಿಯ ಉದ್ಯಮಿಗೆ ಹಪ್ತಾಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಡಿಸಿಐಬಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮುಲ್ಕಿ ಕೋಲ್ನಾಡು ನಿವಾಸಿ ಶಶಿ ಪೂಜಾರಿ @ ಶಾಡೋ, (28), ರವಿಚಂದ್ರ ಪೂಜಾರಿ @ ವಿಕ್ಕಿ ಪೂಜಾರಿ (30) ಮಂಗಳೂರು ಪೆರ್ಮಂಕಿ ನಿವಾಸಿ ಧನರಾಜ್ ಪೂಜಾರಿ @ ಧನರಾಜ್ @ ರಾಕ್, (26) ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಮಾಹಿತಿಯಂತೆ ಶುಕ್ರವಾರದಂದು ಬೆಳಿಗ್ಗೆ 07-00 ಗಂಟೆಗೆ ಮಲ್ಪೆಯಲ್ಲಿ ಇನ್ನೊಬ್ಬ ಆರೋಪಿ, ಕೊಳ, ಮಲ್ಪೆ, ಕೊಡವೂರು ನಿವಾಸಿ ಧನರಾಜ್ ಸಾಲ್ಯಾನ್@ ಧನು ಕೊಳ, (30) ಮತ್ತು ಮಲ್ಪೆ ನಿವಾಸಿ ಉಲ್ಲಾಸ ಶೆಣೈ @ ಉಲ್ಲಾಸ್, ( 27) ಎಂಬಾತನನ್ನು ಉಡುಪಿ ಕೋರ್ಟ್ ಬಳಿ ರಸ್ತೆಯ ಬದಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಉಲ್ಲಾಸ ನನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಉಡುಪಿಯ ಉದ್ಯಮಿಯೊಬ್ಬರಿಗೆ ಮಾರ್ಚ್ 13 ರಂದು ಹಫ್ತಾ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಉಡುಪಿಯ ಡಿ.ಸಿ.ಐ.ಬಿ. ತಂಡವನ್ನು ಜಾಗೃತಗೊಳಿಸಲಾಗಿದ್ದು ಅದರಂತೆ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಸಿ. ಕಿರಣ್ ರವರು ತಮ್ಮ ತಂಡದೊಂದಿಗೆ ಪ್ರಕರಣದ ಪತ್ತೆಗೆ ಕಾರ್ಯತಂತ್ರವನ್ನು ರೂಪಿಸಿ, ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ, ಫಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿ ಹಫ್ತಾ ವಸೂಲಿಗೆ ಕರೆ ಮಾಡಿದ ಆರೋಪಿ ಶಶಿ ಪೂಜಾರಿ ಎಂಬುವನನ್ನು ಪತ್ತೆ ಹಚ್ಚಲು ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಡಿ.ಸಿ.ಐ.ಬಿ. ತಂಡ ಸಜ್ಜಾಗಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿತು.

ಬೆಂಗಳೂರಿನ ಜೆ.ಪಿ. ನಗರದಲ್ಲಿ ಸಂಚರಿಸಿ, ಬೆಂಗಳೂರಿನಲ್ಲಿ ಮೋಜು ಮಾಡುವ ಪ್ರತಿಷ್ಠಿತ ತಾಣಗಳಾದ ಎಂ.ಜಿ. ರಸ್ತೆ, ಸೈಂಟ್ ಮಾಕ್ರ್ಸ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ಓಡಾಡಿಕೊಂಡು ಬ್ರಿಗೇಡ್ ರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿರುವ ಪಬ್ಗಳಲ್ಲಿ ಕೂಲಂಕುಷವಾಗಿ ಪರಿಶೀಲಿಸುವಾಗ ಬ್ರಿಗೇಡ್ ಅಡ್ಡ ರಸ್ತೆಯಲ್ಲಿರುವ ಬಾರೊಂದರ ಬಳಿ ದಿನಾಂಕ: 21-03-2019 ರಂದು ರಾತ್ರಿ ಸುಮಾರು 10:30 ಗಂಟೆ ಸಮಯಕ್ಕೆ ಹೋದಾಗ ಬಾರಿನ ಹೊರಗಡೆ 3 ಜನರು ನಿಂತುಕೊಂಡು ಮಾತನಾಡುತ್ತಿದ್ದು, ಅವರನ್ನು ಸುತ್ತುವರಿದು ಬಂಧಿಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜ ಈಗಾಗಲೇ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿರುವುದನ್ನು ಸ್ಮರಿಸಬಹುದಾಗಿದೆ.

ಈ ದಾಳಿಯಲ್ಲಿ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಸಿ. ಕಿರಣ್ ರವರ ಜೊತೆ ಎ.ಎಸ್.ಐ. ರವಿಚಂದ್ರ, ಸಿಬ್ಬಂದಿಯವರಾದ ಸುರೇಶ್, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಪೂಜಾರಿ ಹಾಗೂ ಚಾಲಕ ರಾಘವೇಂದ್ರ ರವರು ಭಾಗವಹಿಸಿರುತ್ತಾರೆ. ಡಿ.ಸಿ.ಐ.ಬಿ. ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಲಾಗಿದೆ.

ಬಂಧಿಸಲಾಗಿರುವ ಆರೋಪಿಗಳು ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರಾಗಿದ್ದು, ಬನ್ನಂಜೆ ರಾಜನ ಸೂಚನೆಯಂತೆ ಸದ್ರಿ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಸಂಘಟನೆ (ಸಿಂಡಿಕೇಟ್) ಮಾಡಿಕೊಂಡು ಉಡುಪಿಯ ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಇನ್ನಿತರರನ್ನು ಗುರಿಯಾಗಿಸಿಕೊಂಡು ಅವರಿಗೆ ಹಫ್ತಾ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದಲ್ಲಿ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಸಾರ್ವಜನಿಕರಲ್ಲಿ ಭಯ ಭೀತಿ ಉಂಟು ಮಾಡಿರುತ್ತಾರೆ. ಇವರ ವಿರುದ್ಧ ಮಂಗಳೂರು ಉತ್ತರ (ಬಂದರ್), ಪೂರ್ವ (ಕದ್ರಿ), ಬರ್ಕೆ, ಉರ್ವಾ, ಉಲ್ಲಾಳ, ಉಡುಪಿಯ ಮಣಿಪಾಲ, ಮಲ್ಪೆ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.

ಈ ರೀತಿಯ ಹಫ್ತಾ ಹಣ ನೀಡುವಂತೆ ಜೀವ ಬೆದರಿಕೆ ಕರೆಗಳು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ (ದೂರವಾಣಿ ಸಂಖ್ಯೆ: 0820-2526444, ನ್ನು ಸಂಪರ್ಕಿಸಲು ಕೋರಲಾಗಿದೆ.


Spread the love

Exit mobile version