ಹಳೆ ಫೋನ್ ದೂರ ಎಸೆದು ಹೊಸ ಸ್ಮಾರ್ಟ್ ಫೋನ್ ಗೆಲ್ಲವ ವಿನೂತನ ಸ್ಪರ್ಧೆಗೆ ಮುಗಿಬಿದ್ದ ಜನ!

Spread the love

 ಹಳೆ ಫೋನ್ ದೂರ ಎಸೆದು ಹೊಸ ಸ್ಮಾರ್ಟ್ ಫೋನ್ ಗೆಲ್ಲವ ವಿನೂತನ ಸ್ಪರ್ಧೆಗೆ ಮುಗಿಬಿದ್ದ ಜನ!

ಕುಂದಾಪುರ: ಹೇಳಿ ಕೇಳಿ ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ ಯಾವುದೂ ಆಗುವುದಿಲ್ಲ. ಆದರೆ ಜಿಲ್ಲೆಯ ಕುಂದಾಪುರದಲ್ಲಿ ಜನಕ್ಕೆಲ್ಲ ಮೊಬೈಲ್ ಮೇಲೆ ಜಿಗುಪ್ಸೆ ಬಂದಂತೆ ತಮ್ಮ ಬಳಿಯಿದ್ದ ಮೊಬೈಲನ್ನು ಜೇಬಿಂದ ತೆಗೆದು ಜನ ಎತ್ತಿ ಎತ್ತಿ ಬಿಸಾಕುತ್ತಿದ್ದರು. ನಾ ಮುಂದು ತಾ ಮುಂದು ಅಂತ ಬಂದು ದೂರ ದೂರ ಮೊಬೈಲನ್ನು ಎಸೆಯುತ್ತಿದ್ದರು.

ಹೌದು ನಿಮ್ಮಲ್ಲಿರುವ ಹಳೆಯ ಮೊಬೈಲನ್ನು ಎಸೆದು ಹೊಸ ಸ್ಪಾರ್ಟ್ ಫೋನ್ ಪಡೆಯುವ ವಿನೂತನ ಸ್ಪರ್ಧೆ ಭಾನುವಾರ ಕುಂದಾಪುರದ ಬಳಿಯ ಗೊಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿತು.

ಪ್ರಗತಿ ಎಂಟರ್ಪ್ರೈಸಸ್ ಮೊಬೈಲ್ ಅಂಗಡಿ ಮಾಲೀಕ ರೂಪೇಶ್ ಕುಮಾರ್ ಈ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದರು. ತಮ್ಮ ಬಳಿಯಿದ್ದ ಹಳೆಯ ಅಥವಾ ಕಾರ್ಯನಿರ್ವಹಿಸದೇ ಇರುವ ಮೊಬೈಲನ್ನು ಯಾರು ದೂರಕ್ಕೆ ಎಸೆಯುತ್ತಾರೋ ಅವರಿಗೆ ಹೊಸದೊಂದು ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ನೂರಾರು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಶೇಖರ್ ಸೆಟ್ಟೊಳ್ಳಿ ಎಂಬವರು 77.90 ಮೀಟರ್ ದೂರ ಮೊಬೈಲ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು 4ಜಿ ಸ್ಮಾರ್ಟ್ ಫೋನನ್ನು ತಮ್ಮದಾಗಿಸಿಕೊಂಡರು. 72.70 ಮೀ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನವನ್ನು ರಾಜೇಶ್ ಸೆಟ್ಟೊಳ್ಳಿ ಪಡೆದುಕೊಂಡು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಗೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಮೊಬೈಲ್ ಎಸೆತ ಸ್ಪರ್ಧೆಗೆ ಭಾರೀ ಪ್ರಚಾರ ಲಭಿಸಿದ್ದರಿಂದ ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ಭಾಗವಹಿಸಿದ ಸ್ಪರ್ಧಾಳುಗಳಿಗೆ 20ರೂ. ಪ್ರವೇಶ ಶುಲ್ಕ ವಿಧಿಸಲಾಗಿತ್ತು. ಸ್ಪರ್ಧಿಗಳು ಎಸೆದ ಮೊಬೈಲ್ಗಳನ್ನು ಅವರಿಗೆ ಹಿಂದಿರುಗಿಸದೆ ಸಂಗ್ರಹಿಸಲಾಗಿದ್ದು, ಸುಮಾರು 250ಕ್ಕೂ ಅಧಿಕ ಹಳೆಯ ಮೊಬೈಲ್ ಫೋನ್ಗಳು ಸಂಗ್ರಹಗೊಂಡವು. ಎಸೆಯುವ ಮೊಬೈಲ್ಗಳು ಒಡೆದು ಹೋಗದಂತೆ ಪ್ಯಾಕಿಂಗ್ ಮಾಡಿ ಅದರ ಮೇಲೆ ಕ್ರಮಸಂಖ್ಯೆ ಬರೆದ ಬಳಿಕ ಎಸೆಯಲು ಅವಕಾಶ ಮಾಡಿಕೊಡಲಾಗಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ದೈಹಿಕ ಶಿಕ್ಷಕರುಗಳಾದ ರತ್ನಾಕರ್ ನಾಯ್ಕ್, ಚಂದ್ರಶೇಖರ ಕಾರ್ಕಳ, ಸತೀಶ್ ಕುಮಾರ್, ಅಝಾದ್ ಅಹಮದ್ ಕಾರ್ಯ ನಿರ್ವಹಿಸಿದರು. ಗಣೇಶ್ ಕುಮಾರ್ ಶೇಡಿಮನೆ ವೀಕ್ಷಕ ವಿವರಣೆಯಲ್ಲಿ ತೊಡಗಿಸಿಕೊಂಡರು.

ಕಾರ್ಯಕ್ರಮದ ಆಯೋಜಕ ರೂಪೇಶ್ ಕುಮಾರ್ ಮಾತನಾಡಿ ಜನರ ಮನೋರಂಜನೆಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಮೊಬೈಲ್ ಎಸೆತ ಈ ವಿಭಿನ್ನ ಸ್ಪರ್ಧೆ ಉಡುಪಿ ಜಿಲ್ಲೆಯಲ್ಲೇ ಇದು ಎರಡನೇ ಭಾರಿಗೆ ನಡೆದಿರುವುದು. ಈ ಹಿಂದೆ ಇಲ್ಲಿಯೇ ಸಮೀಪದ ಬ್ರಹ್ಮಾವರದಲ್ಲಿ 5 ವರ್ಷಗಳ ಹಿಂದೆ ಮೊಬೈಲ್ ಎಸೆಯುವ ಸ್ಪರ್ಧೆ ಏರ್ಪಡಿಲಾಗಿತ್ತು.

ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತೇವೆ. ಮೊಬೈಲ್ ಎಸೆತ ಸ್ಪರ್ಧೆಯಲ್ಲಿ ಸಂಗ್ರಹಗೊಂಡ ನೂರಾರು ಹಳೆಯ ಮೊಬೈಲ್ಗಳ ಬಿಡಿಭಾಗಗಳನ್ನು ಉಪಯೋಗ ಮಾಡಲಾಗುತ್ತದೆ. ಇದಲ್ಲದೇ ಇ-ವೇಸ್ಟ್ ಖರೀದಿ ಕಂಪೆನಿಯನ್ನು ಸಂಪರ್ಕಿಸಿದ್ದು, ಎಲ್ಲಾ ಮೊಬೈಲ್ ಖರೀದಿ ಮಾಡುವ ಭರವಸೆಯನ್ನು ಕಂಪೆನಿ ನೀಡಿದೆ ಎಂದರು.


Spread the love