ಹಾಜಿ ಅಬ್ದುಲ್ಲಾ ಸಾಹೇಬರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ
ಉಡುಪಿ: ನಾಡು ಕಂಡ ಮಹಾನ್ ಚೇತನ, ಸ್ವಾತಂತ್ರ್ಯ ಹೋರಾಟಗಾರರು ಕೊಡುಗೈ ದಾನಿಯಾಗಿದ್ದ ದಿ| ಹಾಜಿ ಅಬ್ದುಲ್ಲಾ ಸಾಹೇಬರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಪ್ರದರ್ಶನ ಕಾರ್ಯಕ್ರಮ ಬೀಯಿಂಗ್ ಸೋಶಿಯಲ್ ತಂಡದ ವತಿಯಿಂದ ಸೋಮವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾಜಿ ಅಬ್ದುಲ್ಲಾರ ಕುಟುಂಬಸ್ಥರಾದ ಸಿರಾಜ್ ಅಹ್ಮದ್ ಅವರು ಈ ವರೆಗೆ ಹಾಜಿ ಅಬ್ದುಲ್ಲಾರ ಜೀವನ ಚರಿತ್ರೆ ಕೇವಲ ಉಡುಪಿಗೆ ಮಾತ್ರ ಸೀಮಿತವಾಗಿತ್ತು. ಇನ್ನು ಈ ಸಾಕ್ಷ ಚಿತ್ರದಿಂದಾಗಿ ಅವರ ಸಾಧನೆ, ಸೇವೆ ಜಗತ್ತಿಗೆ ಪಸರಿಸಲಿದೆ ಎಂದರು.
ಇದೇ ವೇಳೆ ಮಾತನಾಡಿದ ಖ್ಯಾತ ಮನೋವೈದ್ಯ ಡಾ. ಪಿ ವಿ. ಭಂಡಾರಿ ಅವರು ಜೀವಿತ ಕಾಲದಲ್ಲಿ ಸಾಕಷ್ಟು ದಾನ-ಧರ್ಮ ಮಾಡಿದ ಹಾಜಿ ಅಬ್ದುಲ್ಲಾರಿಗೆ ಅವರ ನಿಧನದ ಬಳಿಕವೂ ಅನ್ಯಾಯ ಮಾಡಲಾಗುತ್ತಿದೆ. ಅವರು ದಾನ ಮಾಡಿದ ಜಾಗವನ್ನು ಉದ್ಯಮಿಗಳಿಗೆ ಮಾರಾಟ ಮಾಡಿ ಸರಕಾರಗಳು ಮೋಸ ಮಾಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮುರಳಿಧರ ಉಪಾಧ್ಯ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕಾಂತ್ ಶೆಟ್ಟಿ ಅವರು ಸುಮಾರು ಒಂದು ವರ್ಷದಿಂದ ಈ ಸಾಕ್ಷ್ಯ ಚಿತ್ರಕ್ಕಾಗಿ ತಯಾರಿ ನಡೆದಿದ್ದು, ಹಾಜಿ ಅಬ್ದುಲ್ಲಾರ ಸಾಧನೆ ಬದುಕಿದ ರೀತಿ ಸಮಾಜಕ್ಕೆ ತಿಳಿಸುವುದು ಈ ಸಾಕ್ಷ್ಯ ಚಿತ್ರದ ಉದ್ದೇಶವಾಗಿದೆ ಎಂದರು.
ಬಿಯಿಂಗ್ ಸೋಶಿಯಲ್ ತಂಡದ ಅವಿನಾಶ್ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರದಮ ಬಳಿಕ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು.
ಕನ್ನಡ ಭಾಷೆಯಲ್ಲಿರುವ ಈ ಸಾಕ್ಷ್ಯ ಚಿತ್ರದಲ್ಲಿ ಇಂಗ್ಲಿಷ್ ಸಬ್ ಟೈಟಲ್ ಇದ್ದು, ಇದನ್ನು ಯುಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗುವುದು. ಸಾಕ್ಷ್ಯಚಿತ್ರಕ್ಕೆ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಸ್ಕ್ರಿಪ್ಟ್ ಬರೆದಿದ್ದು, ನಿತೀಶ್ ರಾವ್ ಸಂಕಲನ ಮಾಡಿದ್ದು, ಶಶಿಕಾಂತ್ ಶೆಟ್ಟಿ ಕ್ಯಾಮಾರ ಕೆಲಸ ಮಾಡಿದ್ದು, ಗುರುರಾಜ್ ಬಿ. ಗ್ರಾಫಿಕ್ಸ್ ಸಹಾಯ ಮಾಡಿದ್ದಾರೆ. ಅವಿನಾಶ್ ಕಾಮತ್ ಧ್ವನಿ ನೀಡಿದ್ದಾರೆ.