ಹಾಲಾಡಿಗೆ ಟಿಕೇಟ್ ವಿರೋಧಿಸಿ ಕಿಶೋರ್ ಕುಮಾರ್ ಸೇರಿದಂತೆ 6 ಮಂದಿ ಅತೃಪ್ತ ಪದಾಧಿಕಾರಿಗಳ ರಾಜೀನಾಮೆ
ಉಡುಪಿ: ಈಗಾಗಲೇ ಒಡೆದ ಮನೆಯಾಗಿರುವ ಕುಂದಾಪುರ ಬಿಜೆಪಿ ಪಕ್ಷಕ್ಕೆ ಇನ್ನೊಂದು ಆಘಾತವೆಂಬಂತೆ, ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅಧಿಕೃತ ಅಭ್ಯರ್ಥಿಯೆಂದು ಘೋಷಣೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯ ಪದಾಧಿಕಾರಿ ಸ್ಥಾನಕ್ಕೆ ಆರು ಮಂದಿ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಮಂಗಳವಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕಿಶೋರ್ ಕುಮಾರ್ ಸೇರಿದಂತೆ ಆರು ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆರು ಮಂದಿ ಪದಾಧಿಕಾರಿಗಳು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸದ್ದಾರೆ.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕಿಶೋರ್ ಕುಮಾರ್, ಸತೀಶ್ ಹೆಗ್ಡೆ, ಚಂದ್ರಮೋಹನ ಪೂಜಾರಿ, ರವಿಂದ್ರ ದೊಡ್ಡಮನಿ, ವಿಠಲ ಪೂಜಾರಿ, ಶ್ರೀನಿವಾಸ ಮರಕಾಲ ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಿಶೋರ್ ಕುಮಾರ್ ಅವರು ಸದ್ಯಕ್ಕೆ ನಾವು ರಾಜೀನಾಮೆ ನೀಡುವುದು ಎಂದು ನಿರ್ಧರಿಸಿ ಪದಾಧಿಕಾರಿಗಳು ರಾಜೀನಾಮೆ ನೀಡಿರುತ್ತೇವೆ. ಕ್ಷೇತ್ರ ಮಟ್ಟದ ಪದಾಧಿಕಾರಿಗಳ ರಾಜೀನಾಮೆ ಬಗ್ಗೆ ಕೂಡಲೇ ಒಂದು ಸಭೆ ನಡೆಸಿ ನಿರ್ದಾರವನ್ನು ನಾವು ಮಾಡಲಿದ್ದು, ಅಲ್ಲಿ ಎಲ್ಲರ ಅಭಿಪ್ರಾಯವನ್ನು ಕ್ರೂಢಿಕರಿಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ. ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಾಲಾಡಿಯ ಪ್ರಚಾರಕ್ಕೆ ಹೋಗುವುದಿಲ್ಲ ಬದಲಾಗಿ ತಟಸ್ಥ ಧೋರಣೆಯನ್ನು ತಳೆಯಲಿದ್ದೇವೆ. ಜಿಲ್ಲೆಯ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ನಾವು ಬಿಜೆಪಿಯ ಅಭ್ಯರ್ಥಿಗಳ ಪರವಾಗಿಯೇ ಕೆಲಸ ಮಾಡಲಿದ್ದೇವೆ. ನಾವು ಬಿಜೆಪಿಯೇ ಆಗಿದ್ದೇವೆ ಆದರೆ ಕುಂದಾಪುರದಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಹಾಗೆಂದು ನಾವು ಯಾವುದೇ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸುವುದು ಅಥವಾ ಬೇರೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಕೆಲಸ ಮಾಡುವುದಿಲ್ಲ. ಈ ಬಾರಿ ಸಹಜವಾಗಿ ನಾನು ಕುಂದಾಪುರದ ಆಕಾಂಕ್ಷಿಯಾಗಿದ್ದೆ. ಕಳೆದ ಬಾರಿ ನನಗೆ ಕೇಳಿ ಪಕ್ಷ ಟಿಕೇಟು ನೀಡಿದ್ದಲ್ಲ ಬದಲಾಗಿ ಒತ್ತಾಯಪೂರ್ವಕವಾಗಿ ಅಭ್ಯರ್ಥಿ ಮಾಡಿತ್ತು. ಆದರೂ ಪಕ್ಷದ ಮಾತಿಗೆ ಬೆಲೆ ಕೊಟ್ಟು ಸೋಲು ಖಚಿತ ಎಂಬುದು ತಿಳಿದಿದ್ದರೂ ಕೂಡ ನಾನು ಸ್ಪರ್ಧೆ ಮಾಡಿದ್ದೇನೆ ಆದರೆ ಈ ಬಾರಿ ಗೆಲ್ಲುವ ವಾತಾವರಣ ಇತ್ತು ನಾನು ಕೂಡ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷ ಹೊರಗಿನಿಂದ ಬಂದವರಿಗೆ ಅಭ್ಯರ್ಥಿಯಾಗಿಸಿದೆ ಆದ್ದರಿಂದ ನಾವು ಈ ಬಾರಿ ತಟಸ್ಥರಾಗಿ ನಿಲ್ಲುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.