Home Mangalorean News Kannada News ಹಾಲು ಉತ್ಪಾದಕರ ಸಬ್ಸಿಡಿ ಹಣ ಶೀಘ್ರ ಬಿಡುಗಡೆ -ಪ್ರಮೋದ್ ಮಧ್ವರಾಜ್

ಹಾಲು ಉತ್ಪಾದಕರ ಸಬ್ಸಿಡಿ ಹಣ ಶೀಘ್ರ ಬಿಡುಗಡೆ -ಪ್ರಮೋದ್ ಮಧ್ವರಾಜ್

Spread the love

ಹಾಲು ಉತ್ಪಾದಕರ ಸಬ್ಸಿಡಿ ಹಣ ಶೀಘ್ರ ಬಿಡುಗಡೆ -ಪ್ರಮೋದ್ ಮಧ್ವರಾಜ್

ಉಡುಪಿ: ರಾಜ್ಯ ಸರ್ಕಾರದ ವತಿಯಿಂದ ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿ ಹಣದ ಮೊತ್ತವನ್ನು ಏಪ್ರಿಲ್ ಮಾಹೆಯ ಒಳಗೆ ಎಲ್ಲಾ ಹೈನುಗಾರರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಭಾನುವಾರ ಉಪ್ಪೂರಿನಲ್ಲಿ ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವತಿಯಿಂದ 92 ಕೋಟಿ ರೂ ವೆಚ್ಚದಲ್ಲಿ ಉಪ್ಪೂರು ನಲ್ಲಿ ನೂತನವಾಗಿ ನಿರ್ಮಿಸುತ್ತಿರುವ 2.5 ಲಕ್ಷ ಲೀ ಸಾಮಥ್ರ್ಯದ ಡೇರಿ ಮತ್ತು ಆಡಳಿತ ಕಚೇರಿ ಸಂಕೀರ್ಣದ ಶಂಕುಸ್ಥಾಪನೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯ ಮೊತ್ತವನ್ನು ರಾಜ್ಯ ಸರ್ಕಾರ 5 ರೂ ಗಳಿಗೆ ಹೆಚ್ಚಳ ಮಾಡಿದೆ, ಇದುವರೆಗೆ ಅಕ್ಟೋಬರ್ 2016 ರ ವರೆಗಿನ ಸಬ್ಸಿಡಿಯ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು, ಮಾರ್ಚ್ 2017 ರ ವರೆಗಿನ ಮೊತ್ತವನ್ನು ಇದೇ ಏಪ್ರಿಲ್ ಮಾಹೆಯ ಅಂತ್ಯದ ಒಳಗೆ ಏಕಗಂಟಿನಲ್ಲಿ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಉಪ್ಪೂರಿನಲ್ಲಿ ನಿರ್ಮಾಣವಾಗುತ್ತಿರುವ ಡೇರಿಗೆ ಸಂಬಂದಪಟ್ಟಂತೆ ಒಕ್ಕೂಟದ ವತಿಯಿಂದ ರಾಜ್ಯ ಸರ್ಕಾರದಿಂದ ಬೇಕಾದ ಅಗತ್ಯ ನೆರವು ನೀಡಲು ಅಗತ್ಯಬಿದ್ದಲ್ಲಿ ಮುಖ್ಯಮಂತ್ರಿಗಳಿಗೆ ನಿಯೋಗ ಕೊಂಡೂಯ್ಯಲು ಸಿದ್ದ ಎಂದು ಸಚಿವರು ತಿಳಿಸಿದರು.

10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪರಾರಿ ಸೇತುವೆ ನಿರ್ಮಾಣವಾದರೆ ಉಪ್ಪೂರಿಗೆ ಮಣಿಪಾಲದಿಂದ ನೇರ ಸಂಪರ್ಕ ಸಾಧ್ಯವಾಗಲಿದ್ದು, ಉಪ್ಪೂರಿನಲ್ಲಿ ಜಿ.ಟಿ.ಟಿ.ಸಿ ಕಾಲೇಜು ಪ್ರಾರಂಭಿಸಲು 10 ಕೋಟಿ ಬಿಡುಗಡೆ ಆಗಿದ್ದು,ಶೀಘ್ರದಲ್ಲಿ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ, ಈಗ ಡೇರಿ ಸಹ ಪ್ರಾರಂಭವಾಗುತ್ತಿರುವುದರಿಂದ ಉಪ್ಪೂರಿನ ಸಮಗ್ರ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

ಡೇರಿ ಸಂಸ್ಕರಣಾ ಘಟಕದ ಶಂಕುಸ್ಥಾಪನೆ ನೆರವೇರಿಸಿ ಸಂಸದೆ ಶೋಭಾ ಕರಂದ್ಲಾಜೆ ಮತನಾಡಿ, ಹೈನುಗಾರಿಕೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ, ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಠದಲ್ಲಿರುವ ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ಹೈನುಗಾರಿಕೆ ಜೀವನವನ್ನು ಹಸನು ಮಾಡಿದೆ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಸಾಧ್ಯ, ಅವಿಭಜಿತ ದ.ಕನ್ನಡ ಜಿಲ್ಲೆ ಹಾಲು ಉತ್ಪಾದನೆಯನ್ನು ಸ್ವಾವಲಂಬಿ ಆಗಲು ಈ ಡೇರಿ ಸಹಾಯಕವಾಗಲಿದೆ, ಅತ್ಯಾಧುನಿಕ ಶೀಥಲೀಕರಣ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳು ಇಲ್ಲಿ ದೊರೆಯಲಿದೆ ಎಂದ ಸಂಸದರು ಗೋವುಗಳನ್ನು ಸಂರಕ್ಷಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ರಾಜ್ಯದ 14 ಹಾಲು ಒಕ್ಕೂಟಗಳಲ್ಲಿ ದ.ಕನ್ನಡ ಒಕ್ಕೂಟ ಪ್ರಥಮ ಸ್ಥಾನದಲ್ಲಿದೆ, ಇಲ್ಲಿ ಹಾಲು ಸಂಗ್ರಹಣೆಗೆ ರೈತರಿಗೆ ರಾಜ್ಯದಲ್ಲೇ ಅತ್ಯಂತ ಹೆಚ್ಚು ದರ ನೀಡಲಾಗುತ್ತಿದೆ, ಪ್ರಸ್ತುತ ನಿರ್ಮಾಣವಾಗುತ್ತಿರುವ ಈ ಡೇರಿ 2018 ನವೆಂಬರ್ ಒಳಗೆ ಕಾರ್ಯರಂಭ ಮಾಡಲಿದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರದ ಹಿರಿಯ ಸಾಧಕ ಭಾರತೀಯ ವಿಕಾಸ ಟ್ರಸ್ಟ್ ನ ಕೆ.ಎಂ. ಉಡುಪ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಶಾಸಕ ಕೋಟಾ ಶ್ರೀನಿವಾಶ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯ ಜನಾರ್ಧನ ತೋನ್ಸೆ, ಉಪ್ಪೂರು ಗ್ರಾ.ಪಂ. ಅಧ್ಯಕ್ಷೆ ಆರತಿ, ಸದಸ್ಯ ಮಹೇಶ್ ಕೋಟ್ಯಾನ್, ದ.ಕನ್ನಡ ಸಹಕಾರಿ ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ ಸತ್ಯ ನಾರಾಯಣ ಹಾಗೂ ಒಕ್ಕೂಟದ ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿದರು, ಉಪ ವ್ಯವಸ್ಥಾಪಕ ಕೆ.ಜಯದೇವಪ್ಪ ಹಾಗೂ ಸಹಾಯಕ ವ್ಯವಸ್ಥಾಪಕ ಸುಧಾಕರ್ ಸ್ವಾಗತಿಸಿದರು.


Spread the love

Exit mobile version