ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಶಿವಮೊಗ್ಗ: ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ, ಸರ್ಕಾರ ಎಚ್ಚೆತ್ತುಕೊಂಡು ದೇಶದ್ರೋಹಿಗಳ ಮೇಲೆ ಕ್ರಮ ಜರುಗಿಸಬೇಕು ಇಲ್ಲದವಾದ ಪರಿಣಾಮ ಬೇರೆನೆ ಆಗುತ್ತದೆ ಎಂದು ಆರ್ ಎಸ್ ಎಸ್ ಹಿರಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಹಿಂದೂ ಸಂರಕ್ಷಣಾ ವೇದಿಕೆ ವತಿಯಿಂದ ನಗರದ ಗೋಪಿ ವೃತ್ತದ್ದಲಿ ಇಂದು ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಧರ್ಮ ಹಾಗೂ ಸಂಸ್ಕೃತಿಯ ಆಧಾರದ ಮೇಲೆ ನಿಂತಿದೆ. ಇಂತಹ ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳೂ ನಡೆಯಲೇಬಾರದು. ಅದನ್ನು ಸಹಿಸಲು ಸಾಧ್ಯವೇ ಇಲ್ಲ ಸರ್ಕಾರ ಈ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಆ ಕೆಲಸವನ್ನು ನಾವು ಮಾಡಬೇಕಾಗುತ್ತದೆ ಎಂದರು.
ತಲಾಖ್ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ಮುಸ್ಲಿಂ ಹೆಣ್ಣು ಮಕ್ಕಳ ಬೆಂಬಲ ಇದೆ. 126 ಕೋಟಿ ಜನರಿಗೆ ಒಂದೇ ಕಾನೂನು ಜಾರಿಗೆ ತರಬೇಕೆಂಬ ಉದ್ದೇಶದಿಂದ ಈ ಸಮಾನ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿದೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈ ಹಿಂದೆ ಪತ್ನಿಗೆ ವಂಚಿಸಿ ತಲಾಖ್ ನೀಡಿದವರನ್ನು ಶಿಕ್ಷೆಯಿಂದ ಪಾರು ಮಾಡಲು ಕಾಂಗ್ರೆಸ್ ಸರಕಾರ ಕಾನೂನನ್ನೆ ಬದಲಿಸಿದೆ ಎಂದು ಆರೋಪಿಸಿದರು. ನಿಮ್ಮ ಹೆಣ್ಣು ಮಕ್ಕಳನ್ನು ಕೆಲವು ಮುಸ್ಲಿಂ ಯುವಕರ ಜೊತೆ ಸೇರಿಸಬೇಡಿ. ದೊಡ್ಡ ಪ್ರಮಾಣದಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಹೆಣ್ಣು ಮಕ್ಕಳನ್ನು ಬೇಟೆಯಾಡುತ್ತಿದ್ದಾರೆ ಇದಕ್ಕೆಲ್ಲಾ ಅವಕಾಶ ಕೊಡಬೇಡಿ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಧರ್ಮದ ಬಗ್ಗೆ ತಿಳಿಹೇಳಿ, ಅವರಲ್ಲಿ ಚಿಂತನೆಯನ್ನು ಬೆಳೆಸಿ ಎಂದು ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಡಿಸಿ ಮತ್ತು ಎಸ್ಪಿ ಒಳ್ಳಯವರಾಗಿದ್ದು, ಅವರು ಸತ್ಯ, ನ್ಯಾಯದ ಪರವಾಗಿ ಕೆಲಸ ಮಾಡಿ ಅನ್ಯಾಯಕ್ಕೊಳಗಾಗದ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಅತ್ಯಾಚಾರ, ಹಿಂದೂ ಮುಖಂಡರ ಕೊಲೆ ಪ್ರಕರಣ ಹೆಚ್ಚಾಗುತ್ತಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪೋಲಿಸ್ ಇಲಾಖೆ ಸತ್ತಂತಿದೆ. ಹೀಗಾದರೆ ಸಹಿಸಲ್ಲ. ನಮ್ಮ ಸಹನೆಗೂ ಒಂದು ಮಿತಿ ಇದೆ ಇನ್ನೆಷ್ಟು ಕೊಲೆಗಳು ಅತ್ಯಾಚಾರ ನಡೆಯಬೇಕು ಎಂದು ಪ್ರಶ್ನಿಸಿದರು.
ದೇಶದ್ರೋಹಿ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಬೇಕು. ಹೆಚ್ಚುತ್ತಿರುವ ದೌರ್ಜನ್ಯಗಳಿಂದ ನಮ್ಮ ರಕ್ತ ಕುದಿಯುತ್ತಿದೆ. ಶಾಂತಿಯಿಂದ ಇರಿ ಎಂದರೆ ಹೇಗೆ ಸಾಧ್ಯ. ಅತ್ಯಾಚಾರಕ್ಕೋಳಗಾದ ಹೆಣ್ಣುಮಗಳಿಗೆ ನ್ಯಾಯ ಕೊಡಿಸಿ, ಹಿಂದೂ ಮುಖಂಡರ ಹತ್ಯೆ ಮಾಡುತ್ತಿರುವ ಗೂಂಡಾಗಳನ್ನು ಬಂಧಿಸಿ ಎಂದು ಆಗ್ರಹಿಸಿದರು.
ಈ ವೇಳೆ ಆಯನೂರು ಮಂಜುನಾಥ್, ಬಿ ವೈ ರಾಘವೇಂದ್ರ, ಎಸ್ ಎನ್ ಚನ್ನಬಸಪ್ಪ, ಪಟ್ಟಾಭಿ ದೀನದಯಾಳು, ರಮೇಶ್ ಬಾಬು, ಸಚಿನ್ ಮೊದಲಾದವರು ಉಪಸ್ಥಿತರಿದ್ದರು.