ಹಿಂದೂ ಸಂಘಟನೆಗಳಿಂದ ಭಿನ್ನ ಕೋಮಿನ ವಿದ್ಯಾರ್ಥಿಗಳಿಗೆ ಹಲ್ಲೆ; ಪೋಲಿಸರಿಂದ ರಕ್ಷಣೆ

Spread the love

ಹಿಂದೂ ಸಂಘಟನೆಗಳಿಂದ ಭಿನ್ನ ಕೋಮಿನ ವಿದ್ಯಾರ್ಥಿಗಳಿಗೆ ಹಲ್ಲೆ; ಪೋಲಿಸರಿಂದ ರಕ್ಷಣೆ

ಕುಂದಾಪುರ: ಉಡುಪಿ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಮರವಂತೆ ಬೀಚ್‍ಗೆ ಆಗಮಿಸಿದ್ದು, ಮರಳಿ ಹೋಗುವಾಗ ಕೋಟೇಶ್ವರದಲ್ಲಿ ಹಿಂದೂತ್ವ ಸಂಘಟನೆಯ ಕಾರ್ಯಕರ್ತರು ಅಡ್ಡಹಾಕಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

 ಉಡುಪಿಯ ಕಾಲೇಜೊಂದರ ವಿದ್ಯಾರ್ಥಿಗಳ ತಂಡದಲ್ಲಿ ಭಿನ್ನ ಕೋಮಿನ ಒಟ್ಟು ಐದು ಮಂದಿ ಯುವಕ ಯವತಿಯರು ಕಾಪುವಿನಿಂದ ಬೈಂದೂರಿಗೆ ತೆರಳಿದ್ದರು. ಬೈಂದೂರಿನಿಂದ ವಾಪಾಸಾಗುತ್ತಿದ್ದ ವೇಳೆ ಮರವಂತೆಯ ಕಡಲ ಕಿನಾರೆಯಲ್ಲಿ ಸ್ವಲ್ಪ ಹೊತ್ತು ಕೂತು ಅಲ್ಲಿಂದ ವಾಪಾಸಾಗಿದ್ದರು.

ಈ ತಂಡದ ಚಲನವಲನ ಗಮನಿಸಿದ ಅಲ್ಲಿನ ಸ್ಥಳೀಯ ಯುವಕರ ತಂಡ ವಿದ್ಯಾರ್ಥಿಗಳ ಕಾರನ್ನು ಬೆನ್ನಟ್ಟಿತ್ತು. ಕುಂದಾಪುರ ಸಮೀಪಸುತ್ತಿದ್ದಂತೆ ಓವರ್‍ಟೇಕ್ ಮಾಡುತ್ತಿರುವುದನ್ನು ಗಮನಿಸಿದ ಮುಸ್ಲಿಂ ಯುವಕ ಫೋಟೋ ತೆಗೆಯಲು ಮುಂದಾಗಿದ್ದನು. ಈ ವೇಳೆ ಕುಪಿತರಾದ ಸ್ಥಳೀಯ ಯುವಕರ ತಂಡ ಕೋಟೇಶ್ವರದ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿತ್ತು.

ವಿದ್ಯಾರ್ಥಿಗಳು ತೆರಳುತ್ತಿದ್ದ ಕಾರನ್ನು ಕೋಟೇಶ್ವರದಲ್ಲಿ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ವಿದ್ಯಾರ್ಥಿಗಳಿಗೆ ಹಲ್ಲೆಗೈದು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಈ ಅನಿರೀಕ್ಷಿತ ಹಲ್ಲೆಯಿಂದ ಆತಂಕಿತರಾದ ವಿದ್ಯಾರ್ಥಿಗಳು ನಾವೆಲ್ಲಾ ಸ್ನೇಹಿತರು. ಸುತ್ತಾಡಲು ಬಂದಿದ್ದೇವೆ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ಹೋಗಲು ಬಿಡದೆ ರಾದ್ದಾಂತ ಮಾಡಿದರು. ಈ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಸಾರ್ವಜನಿಕರು ಜಮಾಯಿಸಿದ್ದು, ಕ್ಷಣ ಕಾಲ ಆತಂಕ ಸೃಷ್ಠಿಯಾಯಿತು.

ಸುದ್ದಿ ತಿಳಿದ ಕೂಡಲೇ ಮುಂಜಾಗ್ರತ ಕ್ರಮವಾಗಿ ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಪೋಲೀಸರು ಸಾರ್ವಜನಿಕರನ್ನು ಚದುರಿಸಿ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದರು. ಬಳಿಕ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಎಲ್ಲರೂ ಸ್ನೇಹಿತರು. ಅಲ್ಲದೇ ಓರ್ವ ಮುಸ್ಲಿಂ ಯುವಕನ ಸಹೋದರಿ ಕೂಡ ಕಾರಿನಲ್ಲಿದ್ದದ್ದು ಪೋಲೀಸರ ಗಮನಕ್ಕೆ ಬಂದಿದೆ. ಬೇರಾವ ಉದ್ದೇಶದಿಂದ ವಿದ್ಯಾರ್ಥಿಗಳು ಬಂದಿಲ್ಲ ಎಂದು ವಿಚಾರಣೆ ನಡೆಸಿದ ಬಳಿಕ ಪೋಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭ ಪೋಲೀಸರ ಬಳಿ ತಮಗೆ ಹಲ್ಲೆಗೈದ ಕುರಿತು ತಿಳಿಸಿದ ವಿದ್ಯಾರ್ಥಿಗಳು ರಕ್ಷಣೆಗೆ ವಿನಂತಿಸಿದ್ದರು.

 ಈ ವೇಳೆಯಲ್ಲಿ ಕುಂದಾಪುರ ಪೋಲೀಸ್ ಠಾಣೆಯ ಎದುರು ಹಿಂದೂಪರ ಸಂಘಟನೆಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿದ್ದನ್ನು ಪೋಲೀಸರು ಪ್ರಶ್ನಿಸಿದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೋಲೀಸರಿಗೆ ಗದರಿಸುವ ರೀತಿಯಲ್ಲಿ ಮಾತನಾಡಿದ್ದರು. ಮುಖಂಡರ ಈ ಮಾತಿಗೆ ಆಕ್ರೋಶಗೊಂಡ ಸಿಪಿಐ ಮಂಜಪ್ಪ, ಕಾರನ್ನು ತಡೆಯಲು ನಿಮಗ್ಯಾರು ಹೇಳಿದ್ದು. ಎಲ್ಲಾನೂ ನೀವೆ ಮಾಡೋದಾದರೆ ಪೋಲೀಸರು ನಾವ್ಯಾಕೆ? ನೀವೇನು ಪೋಲೀಸರಾ ಎಂದು ಪ್ರಶ್ನಿಸಿದರು. ಕುಂದಾಪುರ ಸಿಪಿಐ ಮಂಜಪ್ಪ ಹಾಗೂ ನಾಸೀರ್ ಹುಸೇನ್ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

 ಕುಂದಾಪುರ ಪೋಲೀಸರು ವಿದ್ಯಾರ್ಥಿಗಳ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದು, ಕೇಸು ದಾಖಲು ಮಾಡುವುದಕ್ಕೆ ವಿದ್ಯಾರ್ಥಿಗಳ ಪೋಷಕರು, ತಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದ  ಹಿಂಜರಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಯಾವುದೇ ಕೇಸು ಹಾಕಲಾಗಿಲ್ಲ ಎಂದು ಸಿಪಿಐ ಮಂಜಪ್ಪ ತಿಳಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳು ಪೋಲೀಸರ ನೆರವಿನಿಂದ ಮನೆಗೆ ತೆರಳಿದ್ದಾರೆ.


Spread the love