ಹಿಂಸೆ ಖಂಡನಾರ್ಹ, ಧರ್ಮಗುರುಗಳು ಮಾರ್ಗದರ್ಶನ ಮಾಡಲಿ- ಜಿಲ್ಲಾ ಕಾಝಿ ಕರೆ

Spread the love

ಹಿಂಸೆ ಖಂಡನಾರ್ಹ, ಧರ್ಮಗುರುಗಳು ಮಾರ್ಗದರ್ಶನ ಮಾಡಲಿ- ಜಿಲ್ಲಾ ಕಾಝಿ ಕರೆ

ಮಂಗಳೂರು: ಜಿಲ್ಲೆ ಮತ್ತೆ ಉದ್ವಿಘ್ನಗೊಂಡಿದೆ. ದೀಪಕ್ ಎಂಬ ಯುವಕನ ಹತ್ಯೆ ಮತ್ತು ಆ ಬಳಿಕ ಇಬ್ಬರ ಮೇಲೆ ನಡೆದ  ಹತ್ಯಾ ಯತ್ನಗಳು ಅತ್ಯಂತ ಖಂಡನಾರ್ಹವಾದುದು. ಹಿಂಸೆ ಯಾವ ಸಮಸ್ಯೆಗೂ ಉತ್ತರವಲ್ಲ. ಅಲ್ಲದೇ ಹಿಂಸೆಯಲ್ಲಿ ನಂಬಿಕೆಯಿರಿಸಿದವರು ಯಾವುದಾದರೊಂದು ಧರ್ಮದ ಪಾಲಿಗಷ್ಟೇ ಕಳಂಕವಲ್ಲ, ಒಟ್ಟು ಸಮಾಜದ ಹಿತಕ್ಕೇ ಅಪಾಯಕಾರಿಗಳು ಎಂದು ದ. ಕ. ಜಿಲ್ಲಾ ಕಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.

ಹಿಂಸೆ ಮತ್ತು ಧರ್ಮವನ್ನು ಯಾರೂ ಜೊತೆಗಿಟ್ಟು ನೋಡಬಾರದು. ಅಂಥವರನ್ನು ಧರ್ಮದ್ರೋಹಿಗಳ ಪಟ್ಟಿಯಲ್ಲಿಟ್ಟು ನೋಡಬೇಕೇ ಹೊರತು ಹಿಂದೂ ಮುಸ್ಲಿಂ ಎಂದು ವಿಭಜಿಸುವುದು ಆಯಾ ಧರ್ಮವನ್ನೇ ಅವಮಾನಿಸಿದಂತೆ. ಸದ್ಯ ಈ ಜಿಲ್ಲೆಯನ್ನು ಹಿಂಸೆಯಿಂದ ಮುಕ್ತಗೊಳಿಸಬೇಕಾಗಿದೆ. ಎಲ್ಲರೂ ನೆಮ್ಮದಿಯಿಂದ ಬಾಳುವ ವಾತಾವರಣ ನಿರ್ಮಿಸಲು ಕೈ ಜೋಡಿಸಬೇಕಾಗಿದೆ. ಹಿಂಸೆಯಲ್ಲಿ ಯಾರೆಲ್ಲ ತೊಡಗಿಸಿಕೊಂಡಿದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಲಿ. ಹತ್ಯೆಯಾದ ದೀಪಕ್ ಕುಟುಂಬಕ್ಕೂ ಇರಿತಕ್ಕೊಳಗಾದವರ ಕುಟುಂಬಕ್ಕೂ ಅಲ್ಲಾಹನು  ಸಾಂತ್ವನವನ್ನು ನೀಡಲಿ. ಹಿಂದೂ ಮತ್ತು ಇಸ್ಲಾಂ ಧರ್ಮದ ಧರ್ಮ ಗುರುಗಳು ಒಂದೆಡೆ ಸೇರಿ ಯುವ ಸಮೂಹ ಪ್ರಚೋದನೆಗೆ ಒಳಗಾಗದಂತೆ ಮಾರ್ಗದರ್ಶನ ಮಾಡುವ ಪ್ರಯತ್ನ ನಡೆಸಲಿ ಎಂದು ಅವರು ಕರೆ ಕೊಟ್ಟಿದ್ದಾರೆ.


Spread the love