ಹಿರಿಯಡ್ಕ ದನದ ವ್ಯಾಪಾರಿ ಸಾವು; ಮೂವರು ಪೋಲಿಸರ ಸಹಿತ 6 ಮಂದಿ ಬಂಧನ
ಉಡುಪಿ: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದ ಸಾವಿನ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಹುಸೈನಬ್ಬ ಪ್ರಕರಣ ಸಂಬಂಧ ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ.ಎನ್.ಕುಮಾರ್, ಠಾಣಾ ಜೀಪು ಚಾಲಕ ಗೋಪಾಲ್, ಹೆಡ್ಕಾನ್ಸ್ಟೇಬಲ್ ಮೋಹನ್ ಕೊತ್ವಾಲ್ ಹಾಗೂ ಬಜರಂಗದಳದ ಕಾರ್ಯಕರ್ತರಾದ ಪೆರ್ಡೂರು ಪಕಾಲು ನಿವಾಸಿ ಚೇತನ್ ಯಾನೆ ಚೇತನ್ ಆಚಾರ್ಯ (22), ಪೆರ್ಡೂರು ಅಲಂಗಾರು ನಿವಾಸಿ ಶೈಲೇಶ್ ಶೆಟ್ಟಿ (20), ಪೆರ್ಡೂರು ಕೆನ್ನೆತ್ಬೈಲುವಿನ ಗಣೇಶ್ ನಾಯ್ಕ(24) ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿರಿಯಡ್ಕ ಎಸ್ಸೈ ಹಾಗೂ ಇತರ ಪೊಲೀಸರು ವಿಚಾರಣೆ ವೇಳೆ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಅದರಂತೆ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಳ್ಳಾರಿ ಪೋಲಿಸರ ಸಹಕಾರದಿಂದ ಸುರೇಶ್ ಮೇಂಡನ್, ಪ್ರಸಾದ್ ಕೊಂಡಾಡಿ, ಉಮೇಶ್ ಶೆಟ್ಟಿ, ರತನ್ ಎಂಬವರನ್ನು ಬಂಧಿಸಲಾಗಿದ್ದು, ಬಂಧಿತರಿಗೆ ಪೋಲಿಸ್ ಕಸ್ಟಡಿಗೆ ನೀಡಲಾಗಿದೆ.