Home Mangalorean News Kannada News ಹುಸೇನಬ್ಬರ ಕೊಲೆ ಭೇದಿಸಿದ ಎಸ್ಪಿ ನಿಂಬರಗಿಯವರಿಗೆ ದಕ ಕೋಮುಸೌಹಾರ್ದ  ವೇದಿಕೆ ಅಭಿನಂದನೆ

ಹುಸೇನಬ್ಬರ ಕೊಲೆ ಭೇದಿಸಿದ ಎಸ್ಪಿ ನಿಂಬರಗಿಯವರಿಗೆ ದಕ ಕೋಮುಸೌಹಾರ್ದ  ವೇದಿಕೆ ಅಭಿನಂದನೆ

Spread the love

ಹುಸೇನಬ್ಬರ ಕೊಲೆ ಭೇದಿಸಿದ ಎಸ್ಪಿ ನಿಂಬರಗಿಯವರಿಗೆ ದಕ ಕೋಮುಸೌಹಾರ್ದ  ವೇದಿಕೆ ಅಭಿನಂದನೆ

ಮಂಗಳೂರು: ಮೇ 30ರಂದು ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪ ಬಜರಂಗ ದಳದ ಕಾರ್ಯಕರ್ತರ ಗುಂಪೊಂದು ಹಿರಿಯಡ್ಕ ಪೊಲೀಸರ ಉಪಸ್ಥಿತಿಯಲ್ಲಿ 62ರ ಪ್ರಾಯದ ಜಾನುವಾರು ವ್ಯಾಪಾರಿ ಹುಸೇನಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಹೇಯ ಕೃತ್ಯವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅತ್ಯಂತ ಕಟುವಾಗಿ ಖಂಡಿಸುತ್ತದೆ. ಇದೇ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ದುಷ್ಕøತ್ಯದಲ್ಲಿ ಒಳಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನೂ ಬಜರಂಗ ದಳದ ಕಾರ್ಯಕರ್ತರನ್ನೂ ಬಂಧಿಸಿದ ಉಡುಪಿ ಜಿಲ್ಲಾ ಎಸ್‍ಪಿ ಲಕ್ಷ್ಮಣ ನಿಂಬರಗಿಯವರಿಗೆ ವೇದಿಕೆಯು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದಕ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ತಿಳಿಸಿದ್ದಾರೆ .

ಕರಾವಳಿ ಜಿಲ್ಲೆಗಳಲ್ಲಿ ದಶಕಗಳಿಂದ ನಡೆಯುತ್ತಿರುವ ಸಂಘಿಗಳ ಅಟ್ಟಹಾಸಗಳಿಗೆ ಪೊಲೀಸರು ಹೆಚ್ಚುಕಡಿಮೆ ಮೌನಪ್ರೇಕ್ಷಕರಾಗಿರುವ ಸನ್ನಿವೇಶವಿರುವಾಗ ಈ ರೀತಿಯಾಗಿ ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡ ಘಟನೆ ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಅಭೂತಪೂರ್ವ ಎಂದು ಹೇಳಬಹುದು. ಉಡುಪಿ ಎಸ್‍ಪಿ ಯವರ ನಡೆ ರಾಜ್ಯದ ಮತ್ತು ರಾಷ್ಟ್ರದ ಇತರ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ಮಾದರಿಯಾಗಲಿ. ಈ ಸಂದರ್ಭದಲ್ಲಿ ನಾವು 2015ರಲ್ಲಿ ಕೋಬ್ರಾಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯೊಂದರ ವೇಳೆ ತಿಳಿದುಬಂದ ಭಯಾನಕ ಸತ್ಯಾಂಶವೊಂದನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. “ಆಪರೇಷನ್ ಜೂಲಿಯೆಟ್” ಹೆಸರಿನ ಆ ಕುಟುಕು ಕಾರ್ಯಾಚರಣೆಯಲ್ಲಿ ಇಲ್ಲಿನ ಶೇಕಡಾ 60ರಷ್ಟು ಪೊಲೀಸರು ಸಂಘ ಪರಿವಾರಕ್ಕೆ ನಿಷ್ಠೆ ತೋರುವವರೆಂದು ಸ್ವತಃ ಭಾರತೀಯ ಜನತಾ ಪಕ್ಷದ ಎಂಎಲ್‍ಸಿ ಕ್ಯಾಪ್ಟನ್ ಗಣೇಶ ಕಾರ್ಣಿಕರೇ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಹಿರಿಯಡ್ಕದ ಆರೋಪಿ ಪೊಲೀಸರು ಇದೇ “ಕೇಸರಿ” ಪೊಲೀಸರ ಗುಂಪಿಗೆ ಸೇರಿದವರಿರಬೇಕು ಎಂಬುದರಲ್ಲಿ ಅನುಮಾನವಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮುವಾರು ಘಟನೆಗಳಾದ ಜಾನುವಾರು ಸಾಗಾಟಗಾರರಿಗೆ ಹಲ್ಲೆ, ನೈತಿಕ ಪೊಲೀಸ್‍ಗಿರಿ, ಲವ್ ಜಿಹಾದ್ ಆರೋಪ, ಮತಾಂತರ ಆರೋಪ ಇತ್ಯಾದಿ, ಇತ್ಯಾದಿಗಳಲ್ಲಿ ಹೆಚ್ಚಿನ ವೇಳೆ ಹಲ್ಲೆಕೋರರ ಮೇಲೆ ಕೇಸು ದಾಖಲಾಗದಿರಲು ಪೊಲೀಸರ ಕೇಸರೀಕರಣವೇ ಮುಖ್ಯ ಕಾರಣ ಎನ್ನಬಹುದು. ಆದುದರಿಂದ ಈಗ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ರಾಜ್ಯ ಸರಕಾರ ಸಂಘ ಪರಿವಾರಕ್ಕೆ ನಿಷ್ಠರಾದ ಎಲ್ಲಾ “ಕೇಸರಿ” ಪೊಲೀಸರನ್ನು ಗುರುತಿಸುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು; ಬಳಿಕ ಅವರೆಲ್ಲರನ್ನೂ ಸೇವೆಯಿಂದ ವಜಾಗೊಳಿಸಿ ಅವರ ಜಾಗಕ್ಕೆ ಸಂವಿಧಾನ ಮತ್ತು ಜಾತ್ಯತೀತತೆಗೆ ಬದ್ಧರಾಗಿರುವವರನ್ನು ನೇಮಕ ಮಾಡಬೇಕು ಎಂದು ವೇದಿಕೆ ಈ ಮೂಲಕ ಒತ್ತಾಯಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದ ಮರುಸ್ಥಾಪಿಸಲು ಇದು ಅತ್ಯಗತ್ಯವೆಂದು ವೇದಿಕೆ ತಿಳಿಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version