ಹೆಜಮಾಡಿ, ಗಂಗೊಳ್ಳಿ ಬಂದರು ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ : ಯಶ್ಪಾಲ್ ಸುವರ್ಣ ಹರ್ಷ
ಉಡುಪಿ : ಕರಾವಳಿ ಭಾಗದ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಮತ್ತು ಗಂಗೊಳ್ಳಿ ಮೀನುಗಾರಿಕಾ ಬಂದರು ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿ ಮೀನುಗಾರರ ಬಗ್ಗೆ ಕಳಕಳಿ ತೋರಿಸಿದ ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಹೆಜಮಾಡಿ ಬಂದರಿಗೆ 180.84 ಕೋಟಿ ಮತ್ತು ಗಂಗೊಳ್ಳಿ ಬಂದರಿನ ಕಾಮಗಾರಿಗೆ 12 ಕೋಟಿ ಮೊತ್ತದ ಅನುಮೋದನೆಯನ್ನು ನೀಡುವ ಮೂಲಕ ಕರಾವಳಿಯ ಮೀನುಗಾರಿಕೆಯ ಅಭಿವೃದ್ಧಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದೆ.
ಈ ಕಾಮಗಾರಿಗಳ ಅನುಮೋದನೆಗೆ ವಿಶೇಷ ಆಸಕ್ತಿ ವಹಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಕೇಂದ್ರ ಬಂದರು ಸಚಿವರಾದ ನಿತಿನ್ ಗಡ್ಕರಿ, ಕೇಂದ್ರ ಮೀನುಗಾರಿಕಾ ಸಚಿವರಾದ ಗಿರಿರಾಜ್ ಸಿಂಗ್, ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ, ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಮೀನುಗಾರ ಮುಖಂಡರಾದ ಜಿ. ಶಂಕರ್, ಹಾಗೂ ಕರಾವಳಿ ಭಾಗದ ಎಲ್ಲಾ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.