ಹೆಣ್ಣುಮಕ್ಕಳ ಬಗ್ಗೆ ಲಕ್ಷ್ಮಣಗೆ ತಾತ್ಸಾರ – ತಂದೆಯಿಂದಲೇ ಹೆಣ್ಣು ಮಗುವಿನ ಕೊಲೆ
ಮಂಗಳೂರು: ನಗರದ ಬೋಳಾರ್ ಸಮೀಪ ನೇತ್ರಾವತಿ ನದಿ ದಡದಲ್ಲಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆಯೇ ಉಸಿರು ಗಟ್ಟಿಸಿ, ಕೊಲೆ ಮಾಡಿರುವುದು ವಿಚಾರಣೆಯಿಂದ ಬಯಲಾಗಿದೆ.
ಹೆಣ್ಣು ಮಗುವಿನ ತಂದೆ, ಕೊಪ್ಪಳದ ಲಕ್ಷ್ಮಣ ತೆಂಗಿನಹಾಳ ಬಂಧಿತ ಆರೋಪಿ. ಈತನನ್ನು ಬುಧವಾರ ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ದಂಪತಿಯ ಪುತ್ರಿ ಮೌನಶ್ರೀ ಮೃತದೇಹ ಬೋಳಾರ ಸಮೀಪ ನೇತ್ರಾವತಿ ನದಿ ದಡದಲ್ಲಿ ಸೋಮವಾರ ಪತ್ತೆಯಾಗಿತ್ತು.
ಈ ದಂಪತಿ ಬೋಳಾರದಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಲಕ್ಷ್ಮಣ, ಇದೇ 27 ರಂದು ಅನಾರೋಗ್ಯದಿಂದಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿ ಉಳಿದಿದ್ದ. ಪತ್ನಿ ರೂಪಾ, ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಕೆಲಸಕ್ಕೆ ತೆರಳಿದ್ದಳು.
ಮಧ್ಯಾಹ್ನ 12 ಗಂಟೆಗೆ ಪತ್ನಿ ಬಂದು ನೋಡಿದಾಗ ಮಗು ಕಾಣೆಯಾಗಿದೆ ಎಂದು ಲಕ್ಷ್ಮಣ ತಿಳಿಸಿದ. ಮಗುವಿಗಾಗಿ ಹುಡುಕಾಟ ನಡೆಸಿದಾಗ, ಸಂಜೆ 5 ಗಂಟೆ ಸುಮಾರಿಗೆ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮಗುವಿನ ಮೈಮೇಲೆ ತರಚಿದ ಗಾಯಗಳಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಲಕ್ಷ್ಮಣ ತೆಂಗಿನಹಾಳನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ. ತಾನೆ ಉಸಿರುಗಟ್ಟಿಸಿ ಕೊಲೆ ಮಾಡಿ, ನದಿ ನೀರಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಲಕ್ಷ್ಮಣಗೆ ತಾತ್ಸಾರ ಇದ್ದುದೇ ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಸಂದೀಪ ಪಾಟೀಲ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತ್ರಾಯ, ಲಕ್ಷ್ಮಿಗಣೇಶ್, ಎಸಿಪಿ ಸುಧೀರ್ ಹೆಗ್ಡೆ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಸಬ್ ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ ಬಿ., ಎಲ್. ಮಂಜುಳಾ ಹಾಗೂ ಸಿಬ್ಬಂದಿ ಆರೋಪಿಯನ್ನು
ಬಂಧಿಸಿದ್ದಾರೆ.