Home Mangalorean News Kannada News ಹೆದ್ದಾರಿ ಯೋಜನೆಗಳ ತ್ವರಿತ ಪ್ರಕ್ರಿಯೆಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

ಹೆದ್ದಾರಿ ಯೋಜನೆಗಳ ತ್ವರಿತ ಪ್ರಕ್ರಿಯೆಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

Spread the love

ಹೆದ್ದಾರಿ ಯೋಜನೆಗಳ ತ್ವರಿತ ಪ್ರಕ್ರಿಯೆಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ.

ಅವರು ಶುಕ್ರವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಹೆದ್ದಾರಿ ಕಾಮಗಾರಿಗಳಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳು ಕೇಂದ್ರ ಸರಕಾರದ ಹಂತದಲ್ಲಿ ಬಾಕಿ ಇದ್ದರೆ ತನ್ನ ಗಮನಕ್ಕೆ ತರಬೇಕು. ಕೇಂದ್ರ ಸರಕಾರವು ರಾಜ್ಯದ ಹೆದ್ದಾರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ನಡೆಸಲು ಉನ್ನತ ಅಧಿಕಾರಿಯೊಬ್ಬರನ್ನು ಬೆಂಗಳೂರಿನಲ್ಲಿ ನಿಯೋಜಿಸಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಪೂರ್ವ ಯಾವುದೇ ಪ್ರಕ್ರಿಯೆಗಳು ವಿಳಂಭವಾಗಿದ್ದರೆ, ಅಧಿಕಾರಿಗಳು ಆ ಬಗ್ಗೆ ನಿರಂತರವಾಗಿ ಗಮನಹರಿಸಬೇಕು ಎಂದು ಸಂಸದರು ತಿಳಿಸಿದರು.

ಈಗಾಗಲೇ ಕೈಗೆತ್ತಿಕೊಂಡಿರುವ ಉಡುಪಿ-ಮಣಿಪಾಲ ಚತುಷ್ಪಥ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಬೇಕು. ಕಾರ್ಕಳ-ಮೂಡಬಿದ್ರೆ-ಮಂಗಳೂರು ಹೆದ್ದಾರಿಯಲ್ಲಿ ಹೊಂಡಗುಂಡಿಗಳನ್ನು ಮುಚ್ಚಿ, ರಸ್ತೆಯನ್ನು ಕೂಡಲೇ ಸಮರ್ಪಕವಾಗಿರಿಸಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು. ಇದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು, ಮಂಗಳೂರು-ಕಾರ್ಕಳ ಹೆದ್ದಾರಿ ದುರಸ್ತಿ ಕಾಮಗಾರಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ವಸತಿ ನಿರ್ಮಾಣದಲ್ಲಿ ಬಡವರ ಮನೆ ನಿರ್ಮಾಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಇದರಲ್ಲಿ ವಿಳಂಭ ಸಲ್ಲದು. 94 ಸಿ ಹಕ್ಕು ಪತ್ರ ಮಂಜೂರು ಸಂದರ್ಭದಲ್ಲಿ ಭೂಮಿಯ ಒಡೆತನದ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಮಧ್ಯೆ ವಿಳಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟೀ ಸರ್ವೇ ನಡೆಸಿ, ಅದನ್ನು ಪರಿಹರಿಸಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಪ್ರತೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಆರೋಗ್ಯ ಮೇಳ ನಡೆಸಲಾಗುತ್ತಿದ್ದು, ಇದಕ್ಕಾಗಿ 12 ಲಕ್ಷ ರೂ. ವೆಚ್ಚ ಮಾಡಲಾಗುವುದು. ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಮೇಳ ನಡೆಸಲು ಚಿಂತಿಸಲಾಗಿದ್ದು, ಎಲ್ಲಾ ವಿಧದ ತಪಾಸಣೆ ಹಾಗೂ ವಿವಿಧ ಆರೋಗ್ಯ ಯೋಜನೆಗಳ ಮಾಹಿತಿಯನ್ನು ಇದರಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮತ್ತಿತರರು ಇದ್ದರು.


Spread the love

Exit mobile version