ಹೆದ್ದಾರಿ ಸಮೀಪ ಮದ್ಯದಂಗಡಿ ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರ
ಹೊಸದಿಲ್ಲಿ: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ 500 ಮೀ.ವ್ಯಾಪ್ತಿಯಲ್ಲಿನ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂಬ ತನ್ನ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ಹೆದ್ದಾರಿಗಳ ಬದಿಯಲ್ಲಿ ಇನ್ನು ಮುಂದೆ ಮದ್ಯದಂಗಡಿ ಇರುವಂತಿಲ್ಲ.
ಸುಪ್ರೀಂಕೋರ್ಟ್ ಡಿಸೆಂಬರ್ನಲ್ಲಿ ನೀಡಿರುವ ತನ್ನ ತೀರ್ಪಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಮೀಪವಿರುವ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಿರ್ಬಂಧ ತೆರವುಗೊಳಿಸಲು ನಿರಾಕರಿಸಿದೆ.
ದೇಶದೆಲ್ಲೆಡೆ ಮದ್ಯಪಾನ ಸೇವಿಸಿ ವಾಹನ ಚಲಾಯಿಸಿ ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಘಾತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ಕ್ರಮಕ್ಕೆ ಮುಂದಾಗಿದೆ