ಹೆಮ್ಮಾಡಿಯ ‘ಜನತಾ’ ಇತಿಹಾಸ ಬರೆದಿದೆ: ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ನಾಗರಾಜ ಶೆಟ್ಟಿ ಅಭಿಮತ
ಕುಂದಾಪುರ: ಬಹುತೇಕ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕುಸ್ತಿ ಪಂದ್ಯಾಟವನ್ನು ವಿಶಿಷ್ಟ ರೀತಿಯಲ್ಲಿ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸುವ ಮೂಲಕ ಜನತಾ ಇತಿಹಾಸ ಬರೆದಿದೆ ಎಂದು ಎಸ್.ವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ನಾಗರಾಜ ಶೆಟ್ಟಿ ಹೇಳಿದರು.
ಅವರು ಜನತಾ ಪದವಿಪೂರ್ವ ಕಾಲೇಜು, ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕುಸ್ತಿ ಅತ್ಯಂತ ಪುರಾತನ ಕ್ರೀಡೆ. ರಾಜ ಮಹಾರಾಜರ ಕಾಲದಲ್ಲಿ ಮೋಜಿಗಾಗಿ, ಬಲಿಷ್ಠ ವ್ಯಕ್ತಿಗಳನ್ನು ಗುರುತಿಸಲು ಕುಸ್ತಿ ಪಂದ್ಯಾಟ ಆಯೋಜನೆ ಮಾಡಲಾಗುತ್ತಿತ್ತು. ರಾಮಾಯಾಣ ಮಹಾಭಾರತದಲ್ಲಿಯೂ ಕುಸ್ತಿಗೆ ಪ್ರಾಧಾನ್ಯತೆ ಇತ್ತು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಕುಸ್ತಿ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಜನತಾ ಶಿಕ್ಷಣ ಸಂಸ್ಥೆ ಪ್ರಾರಂಭವಾದ ಕಡಿಮೆ ಅವಧಿಯಲ್ಲೇ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ,ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವುದು ವಿಶೇಷ. ಜನತಾ ಕಾಲೇಜು ಕ್ರೀಡಾಕೂಟಗಳನ್ನು ಆಯೋಜಿಸಿದರೆ ಅಲ್ಲಿ ವಿಭಿನ್ನತೆ, ವೈಶಷ್ಟ್ಯತೆ ಇರುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಕಾಲೇಜು ಸಾಬೀತುಪಡಿಸುತ್ತಿದೆ ಎಂದರು.
ಅಂತರಾಷ್ಟ್ರೀಯ ಕಿವುಡರ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದ ಭಾರತ ತಂಡದ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡೆಯ ಪ್ರತೀ ವಿಭಾಗದಲ್ಲೂ ನುರಿತ ಉಪನ್ಯಾಸಕರಿಂದ ತರಬೇತಿ ಕೊಡುತ್ತಿದ್ದೇವೆ. ಹೀಗಾಗಿಯೇ ಸಂಸ್ಥೆ ಸ್ಥಾಪನೆಯಾಗಿ ಒಂದೇ ವರ್ಷದಲ್ಲಿ 27 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಈ ಬಾರಿ ಈಗಾಗಲೇ 20 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 50 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು ಎನ್ನುವುದು ನಮ್ಮ ಗುರಿ. ಕಳೆದ ಎರಡು ವರ್ಷಗಳಲ್ಲಿ ಕುಸ್ತಿಯಲ್ಲಿ ಜನತಾ ಉಡುಪಿ ಜಿಲ್ಲೆಗೆ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದೆ ಎಂದರು.
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಜನತಾ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸುತ್ತಿರುವುದು ಅಭಿನಂದನಾರ್ಹ. ಹೆಚ್ಚೆಚ್ಚು ಇಲಾಖಾ ಮಟ್ಟದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸಿ ಹೆಮ್ಮಾಡಿಯ ಮೈದಾನದಲ್ಲಿ ಬೇರೆ-ಬೇರೆ ಊರಿನ ಕ್ರೀಡಾಪಟುಗಳ ಸಾಧನೆಗೆ ಅವಕಾಶ ಮಾಡಿಕೊಡುವ ಮೂಲಕ ಹೆಮ್ಮಾಡಿ ಕ್ರೀಡಾ ಗ್ರಾಮವಾಗಿ ಹೊರಹೊಮ್ಮುತ್ತಿದೆ ಎಂದು ಜನತಾ ಪ್ರೌಢ ಶಾಲೆಯ ಮುಖ್ತೋಪಾಧ್ಯಾಯ ಮಂಜು ಕಾಳಾವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾದಲ್ಲಿರುವ ಎಲ್ಲಾ ಸಿಬ್ಬಂದಿಗಳು ಸಂಸ್ಥೆಯನ್ನು ಪ್ರೀತಿಸುವುದರ ಜೊತೆಗೆ ವೃತ್ತಿಯನ್ನು ಪ್ರೀತಿಸುವವರು. ಸಾಧನೆಯ ಹಾದಿಯಲ್ಲಿನ ಅಡೆತಡೆಗಳನ್ನು ಮೀರಿ ನೋವನ್ನು ಸಹಿಸಿಕೊಂಡು ಪ್ರೀತಿಯ ಧಾರೆ ಎರೆಯುತ್ತಿರುವ ಗಣೇಶ್ ಮೊಗವೀರ ಅವರು ಈ ಭಾಗದ ಅತೀ ಕಿರಿಯ ಶಿಕ್ಷಣ ತಜ್ಞರಾಗಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಗೌರವಾಧ್ಯಕ್ಷ ಜೀವನ್ ಶೆಟ್ಟಿ, ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಉಪಪ್ರಾಂಶುಪಾಲ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ
ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಉಪನ್ಯಾಸಕ ಉಮೇಶ್ ನಾಯ್ಕ್ ಸ್ವಾಗತಿಸಿದರು. ಅಭಿಜಿತ್ ಧನ್ಯವಾದವಿತ್ತರು. ಉದಯ್ ನಾಯ್ಕ್ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.