ಹೆಲ್ಪಿಂಗ್‌ವಾಲ್‌ನಿಂದ ಬಡವರಿಗೆ ಅನುಕೂಲ: ಎಸ್ಪಿ ಕೆ.ಅಣ್ಣಾಮಲೈ

Spread the love

ಹೆಲ್ಪಿಂಗ್‌ವಾಲ್‌ನಿಂದ ಬಡವರಿಗೆ ಅನುಕೂಲ: ಎಸ್ಪಿ ಕೆ.ಅಣ್ಣಾಮಲೈ

ಚಿಕ್ಕಮಗಳೂರು:ಸಮಾಜದಲ್ಲಿರುವ ಬಡಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಲ್ಪಿಂಗ್‌ ವಾಲ್‌ಗೆ ಚಾಲನೆ ನೀಡಲಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ಹೇಳಿದರು.

ಎಂಜಿ ರಸ್ತೆಯ ಹಳೆ ಪೊಲೀಸ್‌ ಠಾಣೆ ಕಟ್ಟಡದಲ್ಲಿ ಕ್ರೇಡನ್ಸ್‌ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಇಂತಹ ಕಾರ್ಯಕ್ರಮ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

  ಜನತೆ ತಮ್ಮಲ್ಲಿರುವ ತಮಗೆ ಉಪಯೋಗವಾಗದ ವಸ್ತುಗಳನ್ನು ಅಂದರೆ ಬಟ್ಟೆ, ಪುಸ್ತಕ, ಹಾಸಿಗೆ, ಹೊದಿಕೆ ಸೇರಿದಂತೆ ಯಾವುದೇ ವಸ್ತುಗಳನ್ನಾದರೂ ಇಲ್ಲಿಗೆ ತಂದು ಇಡಬಹುದು. ಆ ಪದಾರ್ಥಗಳ ಅವಶ್ಯಕತೆ ಇರುವವರು ಅವುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.

ಇದನ್ನು ನೋಡಿಕೊಳ್ಳಲು ಇಲ್ಲಿ ಯಾರೂ ಇರುವುದಿಲ್ಲ. ಯಾರು ಬೇಕಾದರೂ ವಸ್ತುಗಳನ್ನು ತಂದಿಡಬಹುದು, ಯಾರು ಬೇಕಾದರೂ ಅದನ್ನು ತೆಗೆದುಕೊಂಡು ಹೋಗಬಹುದು. ಉತ್ತಮ ಯೋಚನೆಯನ್ನು ಹೊಂದಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು ಇಬ್ಬರೂ ಇರುತ್ತಾರೆ. ಯಾರಾದರೂ ಇಲ್ಲಿನ ವಸ್ತುಗಳನ್ನು ಕೊಂಡೊಯ್ದು ಬೇರೆಯವರಿಗೆ ಮಾರಾಟ ಮಾಡಬಹುದು. ಅಂತಹ ವ್ಯಕ್ತಿಗಳೂ ಇರುತ್ತಾರೆ. ಆದರೆ, ಅಂತಹ ವ್ಯಕ್ತಿಗಳಿಗೆ ಹೆದರಿ ಒಳ್ಳೆಯ ಕಾರ್ಯಕ್ರಮವನ್ನು ಮಾಡಲು ಹಿಂಜರಿಯಲು ಸಾಧ್ಯವಿಲ್ಲ ಎಂದರು.

ಕ್ರೇಡೆನ್ಸ್‌ ಸಂಸ್ಥೆಯವರು 2 ತಿಂಗಳು ಯೋಜನೆ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸುತ್ತಾರೆ. ಒಂದು ವೇಳೆ ಯೋಜನೆಯ ದುರುಪಯೋಗ ಹೆಚ್ಚಾಗುತ್ತಿರುವುದು ಕಂಡು ಬಂದಲ್ಲಿ ಬದಲಿ ವ್ಯವಸ್ಥೆ ಮಾಡಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಹಕಾರ ಕೊಡಬೇಕು ಎಂದು ಹೇಳಿದರು.

ಎಐಟಿ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಕ್ರೇಡೆನ್ಸ್‌ ಸಂಸ್ಥೆಯವರು ಒಂದು ಉತ್ತಮ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ಉತ್ತಮ ಕಾರ್ಯಯೋಜನೆ ರೂಪಿಸುತ್ತಿರುವವರು ಇಲ್ಲಿಯವರೇ ಆಗಿದ್ದು, ಈಗ ಬೇರೆಡೆ ಉತ್ತಮ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಗರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದಾರೆ ಎಂದರು.

ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ. ಯೂರೋಪಿಯನ್‌ ದೇಶಗಳಲ್ಲಿ ಇಂತಹ ಯೋಜನೆಗಳನ್ನು ರೂಪಿಸಲಾಗಿದೆ. ತಮಗೆ ತಿಳಿದಂತೆ ನಮ್ಮ ದೇಶದಲ್ಲಿ ಬೇರೆಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆರಂಭಿಸಿಲ್ಲ ಎಂದರು. ಕ್ರೇಡೆನ್ಸ್‌ ಸಂಸ್ಥೆಯ ವೀರೇಂದ್ರ, ನಿಶ್ಚಿತ್‌ ಇತರರು ಹಾಜರಿದ್ದರು.

ಯೋಜನೆ ಚಾಲನೆಗೊಂಡ ದಿನವೇ ಹಲವರು ಬಟ್ಟೆ, ಹೊದಿಕೆ, ಪುಸ್ತಕಗಳನ್ನು ಯೋಜನೆಗೆ ನೀಡಿದರು.


Spread the love