ಹೆಸರಾಂತ ಫುಟ್‍ಬಾಲ್‍ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ

Spread the love

ಹೆಸರಾಂತ ಫುಟ್‍ಬಾಲ್‍ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ

ಮುಂಬಯಿ: ಮುಂಬಯಿ ಉಪನಗರದ ಮಲಾಡ್ ಪೂರ್ವದಲ್ಲಿನ ಚಿಂಚೋಲಿ ಪಾಟಕ್ ಗೋವಿಂದನಗರದಲ್ಲಿನ ಶ್ರೀ ಅಂಬಿಕಾ ಮಂದಿರ ಸೇವಾ ಸಮಿತಿ ಸ್ಥಾಪಕ, ಮ್ಯಾಗ್ಳೂರ್‍ಬ್ಲೂಫುಟ್‍ಬಾಲ್ ಟೀಮ್ ಮುಂಬಯಿ ಇದರ ಸಂಸ್ಥಾಪಕ ನಾರಾಯಣ ಟಿ. ಕುಕ್ಯಾನ್ (96.) ಅವರು ಇಂದಿಲ್ಲಿ ಆದಿತ್ಯವಾರ ಮುಂಜಾನೆ ವೃದ್ಧಾಪ್ಯ ಹಾಗೂ ಅಲ್ಪಾವಧಿ ಅನಾರೋಗ್ಯದಿಂದ ಮಲಾಡ್ ಪೂರ್ವದಲ್ಲಿನ ಸಂಜೀವಿನಿ ಆಸ್ಪತ್ರೆಯಲ್ಲಿ ನಿಧನರಾದರು.

narayana-t-kuckian-a

ಮೂಲತಃ ಉಡುಪಿ ಜಿಲ್ಲೆಯ ಹೆಜ್ಮಾಡಿ ಅಡ್ಕ ಮನೆತನದವರಾಗಿದ್ದ ನಾರಾಯಣ ಕುಕ್ಯಾನ್ ಪ್ರಸಿದ್ಧ ಮುಂಬಯಲ್ಲಿ ವೋಲ್ಟಾಸ್ ಸಂಸ್ಥೆಯ ಉದ್ಯೋಗಿ ಆಗಿದ್ದರು. ಉತ್ತಮ ಫುಟ್‍ಬಾಲ್ ಕ್ರೀಡಾಪಟು ಎಣಿಸಿ ಅನೇಕ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತರಾಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲೂ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರುನ ಗುರುದೇವಾನಂದ ಸ್ವಾಮೀಜಿ ಇವರನ್ನು ಸನ್ಮಾನಿಸಿ ಕುಕ್ಯಾನ್ ಅವರ 95ರ ಹರೆಯದ ಉತ್ಸಾಹಿ ಜೀವನವನ್ನು ಪ್ರಶಂಸಿಸಿದ್ದರು.

ಒಡಿಯೂರುಶ್ರೀಗಳ ಸನ್ಮಾನಕ್ಕೆ ಉತ್ತರಿಸಿ ಮನುಷ್ಯನಾದವನು ಜೀವನದಲ್ಲಿ ತ್ಯಾಗಮಾಡಬೇಕು ಆಮೂಲಕದ ಸೇವೆಯಿಂದ ತೃಪ್ತನಾಗಬೇಕು. ನನಗೆ ಸುಭಾಶ್ಚÀಂದ್ರ ಭೋಸ್ ಅವರ ಬದುಕು ಮಾರ್ಗದರ್ಶನವಾಗಿದ್ದು ಅವರ ಹಿಂಬಾಲಕನಾಗಿ ಶಿಸ್ತುಬದ್ಧ ಬದುಕು ರೂಪಿಸಿಕೊಂಡಿದ್ದೇನೆ. ದೇವಸ್ಥಾನ, ಸಂಸ್ಥೆಗಳ ಕಾರ್ಯಕ್ರಮಕ್ಕೆ ಹೋದರೆ ಅಲ್ಲಿ ಪುಕ್ಸಟ್ಟೆ ತಿನ್ನಬಾರದು. ನಿನ್ನೆಯವರ ಕೊಡುಗೆಯಿಂದ ನಾವು ಇಂದು ತಿನ್ನುತ್ತಿದ್ದು, ನಾಳಿನವರಿಗಾಗಿ ನಾವು ಇಂದು ವಂತಿಗೆ ನೀಡುವ ಗುಣ ಬೆಳೆಸಿ ಮಕ್ಕಳಲ್ಲೂ ಇದನ್ನು ಮೈಗೂಡಿಸಿರಿ. ನಮಗೆ ದೇವರ ದರ್ಶನದಲ್ಲೂ ಸ್ವಾರ್ಥ ಬೇಡ. ಒಡಿಯೂರುಶ್ರೀ ನಿತ್ಯಾನಂದರ ಅವತಾರವೇ ಸರಿ. ಅವರಲ್ಲಿ ವಿಶ್ವಾಸವಿರಿಸಿ ಬಾಳುತ್ತಾ ನಾಲ್ಕು ದಿನದ ಬದುಕು ಶುದ್ಧವಾಗಿ ಬಾಳಿರಿ ಎಂದು 95ರ ಕುಕ್ಯಾನ್ ನಿರರ್ಗಳವಾಗಿ ಮಾತನಾಡಿ ಸಭಿಕರಲ್ಲಿ ಅಚ್ಚರಿ ಮೂಡಿಸಿದ್ದರು.

ಮೃತರು ಎರಡು ಗಂಡು, ಮೂರು ಹೆಣ್ಣು ಸೇರಿದಂತೆ ಬಂಧು-ಬಳಗ, ಅಪಾರ ಕ್ರೀಡಾಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಸಂಜೆ ಮಲಾಡ್ ಪೂರ್ವದಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಗಿದ್ದು ನೂರಾರು ಗಣ್ಯರು ಅಂತಿಮ ದರ್ಶನಗೈದು ಅಗಲಿದ ಧೀಮಂತ ಚೇತನ ನಾರಾಯಣ ಕುಕ್ಯಾನ್‍ಗೆ ಶ್ರದ್ದಾಂಜಲಿ ಕೋರಿದರು.

ಕುಕ್ಯಾನ್ ನಿಧನಕ್ಕೆ ಹೆಜ್ಮಾಡಿ ಬಿಲ್ಲವ ಸಂಘದ ಅಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಅಸೋಸಿಯೇಶನ್‍ನ ಕಾಂದಿವಿಲಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಯೋಗೇಶ್ ಕೆ.ಹೆಜ್ಮಾಡಿ ಸೇರಿದಂತೆ ಅಸೋಸಿಯೇಶನ್‍ನ ಹಾಗೂ ವಿವಿಧ ಸ್ಥಳೀಯ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.


Spread the love