Home Mangalorean News Kannada News ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನು ಮಾರುಕಟ್ಟೆ: ಕಾಮಗಾರಿ ತಡೆಗೆ ಕಾರ್ಣಿಕ್ ಆಗ್ರಹ

ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನು ಮಾರುಕಟ್ಟೆ: ಕಾಮಗಾರಿ ತಡೆಗೆ ಕಾರ್ಣಿಕ್ ಆಗ್ರಹ

Spread the love

ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನು ಮಾರುಕಟ್ಟೆ: ಕಾಮಗಾರಿ ತಡೆಗೆ ಕಾರ್ಣಿಕ್ ಆಗ್ರಹ

ಮೂಡಬಿದಿರೆ: ಮೂಡಬಿದರೆ ಸ್ವರಾಜ್ ಮೈದಾನದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಸಿ ಮೀನು ಮಾರುಕಟ್ಟೆ ರಚಿಸುತ್ತಿರುವ ಕಾಮಗಾರಿಗೆ ತಡೆ ನೀಡುವಂತೆ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಮೂಡಬಿದಿರೆ ಸ್ವರಾಜ್ ಮೈದಾನ ರಕ್ಷಣಾ ಸಿಬ್ಬಂದಿಗಳ ಕ್ಯಾಂಪ್ ಗಾಗಿ ಮೀಸಲಿಟ್ಟ ಜಾಗವಾಗಿದೆ. ಇದನ್ನು ರಾಜ್ಯದ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗೆ ಹಸ್ತಾಂತರಿಸಲು ಅಧಿಕಾರ ಇರುವುದಿಲ್ಲ.  ರಕ್ಷಣಾ ಇಲಾಖೆಯ ಒಪ್ಪಿಗೆಯ ಮೇರೆಗೆ ಅಲ್ಲಿ ಕ್ರೀಡಾ ಚಟುವಟಿಕೆಗಳನ್ನು ಮಾತ್ರ ನಡೆಸಬಹುದಾಗಿದೆ. ಆದರೆ ಜಿಲ್ಲಾಡಳಿತ ರಾಜಕೀಯ ಒತ್ತಡಕ್ಕೆ ಮಣಿದು ಕೇಂದ್ರ ರಕ್ಷಣಾ ಮಂತ್ರಾಲಯದ ಸುಪರ್ದಿಯಲ್ಲಿರುವ ಭೂಮಿಯನ್ನು ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಗೆ ಹಸ್ತಾಂತರಿಸಿರುವುದೇ ಮೊದಲ ಅಕ್ರಮ.

ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಅಕ್ರಮವಾಗಿ ಸ್ವರಾಜ ಮೈದಾನದ ಜಾಗವನ್ನು ಇತ್ತೀಚೆಗೆ ರಾಜಕೀಯ ಒತ್ತಡಕ್ಕೆ ಮಣಿದು ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಮುಂದಾಗಿರುವುದು 2ನೇ ಅಕ್ರಮ.

ಸುಂದರವಾದ ಸ್ವರಾಜ್ ಮೈದಾನ ಇಡೀ ಜಿಲ್ಲೆಯಲ್ಲಿಯೇ ಲಬ್ಯವಿರುವ ಅತ್ಯಂತ ದೊಡ್ಡ ಮೈದಾನವಾಗಿದ್ದು, ಮೂಡಬಿದಿರೆಯ ಎಲ್ಲಾ ಸಂಸ್ಕೃತಿಕ, ಕ್ರೀಡಾ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ಲಬ್ಯವಿರುವ ಏಕೈಕ ಮೈದಾನವಾಗಿದೆ. ಇಲ್ಲಿ ಮೀನು ಮಾರುಕಟ್ಟೆ ನಿರ್ಮಾಣದ ಹೆಸರಿನಲ್ಲಿ ಯಂತ್ರಗಳನ್ನು ಬಳಸಿ ಅಗೆದು ಕ್ರೀಡಾಂಗಣದ ಸ್ವರೂಪವನ್ನೆ ಹಾಳುಮಾಡಿ ಕ್ರೀಡಾಂಗಣವನ್ನು ಪುನರ್ ನಿರ್ಮಾಣ ಮಾಡಲು ಅಸಾಧ್ಯವಾಗಿಸಿರುವುದು ದೊಡ್ಡ  ದುರಂತ ಮತ್ತು ಅಕ್ಷಮ್ಯ ಅಪರಾಧ.

ಈ ಕಾಮಗಾರಿಯ ಹಿಂದಿರುವ ರಾಜಕೀಯ ದುರುದ್ದೇಶಗಳನ್ನು ಅರ್ಥೈಸಿ ಉಚ್ಛ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದು, ಅದರ ಆಧಾರದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಮೂಡುಬಿದಿರೆ ಪುರಸಭೆಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಹಾಗೂ ಮೂಡಬಿದಿರೆ  ತಹಶೀಲ್ದಾರರಿಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು ಹಾಗೂ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲಿಖಿತ ಆದೇಶ ನೀಡಿದ್ದಾರೆ. ಆದರೂ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ರಾಜಕೀಯ ಪ್ರೇರಿತವಾದ ನಿಲುವಿನಿಂದಾಗಿ  ಸಾರ್ವಜನಿಕ ಆಟದ ಮೈದಾನವನ್ನು ಕಾನೂನಿನ ವಿರುದ್ಧವಾಗಿ ಅಕ್ರಮವಾಗಿ  ನಾಶಗೊಳಿಸುತ್ತಿರುವುದು ಮೂಡುಬಿದಿರೆಯ ನಾಗರಿಕರ ಗೌರವದ ಪ್ರಶ್ನೆಯಾಗಿದೆ.

ಸರ್ಕಾರ ಸಮಸ್ಯೆಯ ಗಾಂಭೀರ್ಯತೆಯನ್ನು ಅರ್ಥೈಸಿಕೊಂಡು ಎಲ್ಲಾ ರೀತಿಯ ಅಕ್ರಮಗಳಿಗೂ ಸಾಕ್ಷಿಯಾಗಿರುವ ಈ ಅಕ್ರಮ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ, ಮಾನ್ಯ ನ್ಯಾಯಾಲಯದ ಆದೇಶವನ್ನು ಗೌರವಿಸುವಂತೆ ಹಾಗೂ ಸಾರ್ವಜನಿಕ ಆಟದ ಮೈದಾನವನ್ನು ದುರುಪಯೋಗಿಸಿ ನಾಶಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.

ಕ್ರೀಡಾ ಮತ್ತು ಯುವ ಜನ ಸಬಲೀಕರಣ ಸಚಿವರು ಕೂಡಲೆ ಗಮನಹರಿಸಿ ತಮ್ಮ ಇಲಾಖೆಯ ವಶದಲ್ಲಿರುವ ರಕ್ಷಣಾ ಇಲಾಖೆಯ ಜಮೀನಿನ ದುರುಪಯೋಗ ಆಗದಂತೆ ಹಾಗೂ ಯುವಜನರ ಆಶೋತ್ತರಗಳಿಗೆ ಸವಾಲಾಗಿರುವ ಈ ಅಕ್ರಮ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ..

 


Spread the love

Exit mobile version