ಹೊಳಪು ಕ್ರೀಡಾಕೂಟ ಮೈದಾನದ ಭೂಮಿ ಪೂಜೆ
ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ(ರಿ)ಕೋಟ ಇವರ ಆಶ್ರಯದಲ್ಲಿ ಡಿಸೆಂಬರ್ 28 ರಂದು ಕೋಟ ವಿವೇಕ ಸಂಸ್ಥೆಯ ಮೈದಾನದಲ್ಲಿ ನಡೆಯುವ ಉಡುಪಿ.ದ.ಕ ಜಿಲ್ಲೆಯ ಪಂಚಾಯತ್ ರಾಜ್ ಜನಪ್ರತಿನಿಧಿಗಳ ಕ್ರೀಡೋತ್ಸವ ಹಾಗೂ ಸಾಂಸ್ಕøತಿಕ ಸ್ಪರ್ಧೆ ಹೊಳಪು-2019(ನೆನಪಿನ ದಿಬ್ಬಣ) ಕಾರ್ಯಕ್ರಮದ ಮೈದಾನದ ಭೂಮಿ ಪೂಜೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಗುರುವಾರ ನೆರವೆರಿಸಿದರು.
ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದ ದ.ಕ ಉಸ್ತುವಾರಿ ಸಚಿವ ಹಾಗೂ ಹೊಳಪು ಕ್ರೀಡಾಕೂಟದ ಸಂಚಾಲಕ ಕೋಟ ಶ್ರೀನಿವಾಸ ಪೂಜಾರಿ ಅವರು ಜನಪ್ರತಿನಿಧಿಗಳು ಒತ್ತಡ ಎಲ್ಲಾ ಮರೆತು ನಾವೆಲ್ಲರೂ ಒಂದೇ ಎಂದು ಸಂಭ್ರಮಿಸಿ ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣಕ್ಕೆ ನಾವೆಲ್ಲ ಜೊತೆಯಾಗಿ ಹೆಜ್ಜೆ ಇಟ್ಟು ಸಾಗಬೇಕಿದೆ ಈ ಉದ್ದೇಶದಿಂದ ಹೊಳಪು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು ಅಲ್ಲದೇ ಕಾರ್ಯಕ್ರಮದ ರೂಪುರೇಖೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನೀತಾ ಶ್ರೀಧರ್ ಆಚಾರ್ಯ,ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್,ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್,ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ,ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಪೂಜಾರಿ,ಕಾರಂತ ಪ್ರತಿಷ್ಠಾನದ ಸದಸ್ಯ ಶ್ರೀ ಸುಬ್ರಾಯ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ನಿರೂಪಿಸಿ ,ಸಚಿವರ ಆಪ್ತ ಸಹಾಯಕ ಶ್ರೀ ಹರೀಶ್ ಶೆಟ್ಟಿ ವಂದಿಸಿದರು.