Home Mangalorean News Kannada News ಹೊಸ ಪರಿಸರ ನೀತಿಯನ್ನು ಮಾರ್ಪಾಡು ಮಾಡಲು  ಕೇಂದ್ರ ಸರಕಾರಕ್ಕೆ ಎಪಿಡಿ ಆಗ್ರಹ

ಹೊಸ ಪರಿಸರ ನೀತಿಯನ್ನು ಮಾರ್ಪಾಡು ಮಾಡಲು  ಕೇಂದ್ರ ಸರಕಾರಕ್ಕೆ ಎಪಿಡಿ ಆಗ್ರಹ

Spread the love

ಹೊಸ ಪರಿಸರ ನೀತಿಯನ್ನು ಮಾರ್ಪಾಡು ಮಾಡಲು  ಕೇಂದ್ರ ಸರಕಾರಕ್ಕೆ ಎಪಿಡಿ ಆಗ್ರಹ

ಮಂಗಳೂರು: ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಂತಹ ಅಂಶಗಳನ್ನು ಹೊಂದಿರುವ ಹೊಸ ಪರಿಸರ ನೀತಿಯ ಕರಡು ಪ್ರಸ್ತಾವವನ್ನು ತಕ್ಷಣ ಮರು ಪರಿಶೀಲಿಸಿ ಮತ್ತು ಮಾರ್ಪಾಡು ಮಾಡುವಂತೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನು ಆ್ಯಂಟಿ ಪೆÇಲ್ಯುಷನ್ ಡ್ರೈವ್ ಫೌಂಡೇಶನ್ (ಎಪಿಡಿ) ಒತ್ತಾಯಿಸಿದೆ.

ಮುಕ್ತ ಸಮಾಲೋಚನಾ ಪ್ರಕ್ರಿಯೆಯ ಸಮಯಾವಧಿಯನ್ನು ಕಡಿತ, ದೊಡ್ಡ ಪ್ರಮಾಣದ ಯೋಜನೆಗಳನ್ನು ಪರಿಸರ ಅನುಮತಿ ಪಡೆಯುವುದರಿಂದ ವಿನಾಯತಿ, ಯೋಜನಾ ಪ್ರವರ್ತಕರಿಗೆ ಹೊಣೆಗಾರಿಕೆಯಲ್ಲಿ ಕಡಿತ, ಅನಧಿಕೃತ ಯೋಜನಾ ಚಟುವಟಿಕೆಯನ್ನು ಕ್ರಮಬದ್ಧಗೊಳಿಸುವ ಅವಕಾಶ, ನಾಗರಿಕರ ಕಣ್ಗಾವಳು (ಚೌಕಿದಾರ್) ಪಾತ್ರದಲ್ಲಿ ಕೊರತೆ ಮತ್ತು ಕೆಲವು ವರ್ಗಗಳಲ್ಲಿ ಪರಿಸರ ವಿರೋಧಿ ಯೋಜನೆಗಳಿಗೆÀ ಸಾರ್ವಜನಿಕ ಪರಿಶೀಲನೆಯಿಂದ ವಿನಾಯತಿ ಇತ್ಯಾದಿಗಳು ಹೊಸ ಪರಿಸರ ಕರಡು ನೀತಿಯ ಅತ್ಯಂತ ಪ್ರತಿಕೂಲಕಾರಿ ನ್ಯೂನ್ಯತೆಗಳಾಗಿವೆ ಎಂದು ಮಂಗಳೂರಿನಲ್ಲಿ ನಗರ ಆಧಾರಿತ ಮಾಲಿನ್ಯ ನಿಯಂತ್ರಣ ಚಟುವಟಿಕೆ ನಡೆಸುತ್ತಿರುವ ಎಪಿಡಿ ಪ್ರತಿಷ್ಠಾನ ಹೇಳಿದೆ.

ಪರಿಶೀಲನೆಯಿಂದ ‘ಕಾರ್ಯತಂತ್ರದ’ ಯೋಜನೆಗಳಿಗೆ ಅಸ್ಪಷ್ಟ ವಿನಾಯತಿ ನೀಡಲಾಗಿದೆ. ಈ ಗಂಭೀರ ನ್ಯೂನತೆಗಳಿಂದಾಗಿ ಯೋಜನಾ ಅನುಮತಿ ಮತ್ತು ಅನುಷ್ಠಾನ ಪ್ರಕ್ರೀಯೆಯಲ್ಲ್ಲಿ ಪಾರದರ್ಶಕತೆಯ ಕೊರತೆಯನ್ನು ಉಂಟು ಮಾಡಲಿದೆ, ಪರಿಸರ ಸಂರಕ್ಷಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಕುಂಠಿತ ಆಗಲಿದೆ ಮತ್ತು ಸಮೃದ್ಧ ಪರಿಸರ ಸಂಪತ್ತಿನ ವಾಣಿಜ್ಯ ಲೂಟಿ ನಡೆಯಲು ಅನುಕೂಲವಾಗುವ ಸಂಭವವಿದೆ ಎಂದು ಪ್ರತಿಷ್ಠಾನ ಆತಂಕ ವ್ಯಕ್ತಪಡಿಸಿದೆ.

ಆಗಸ್ಟ್ 10, 2020 ರಂದು ಅರಣ್ಯ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸರುವ ಆ್ಯಂಟಿ ಪೆÇಲ್ಯುಷನ್ ಡ್ರೈವ್ ಪ್ರತಿಷ್ಠಾನ ಪತ್ರದಲ್ಲಿ ತನ್ನ ಕಳವಳಗಳನ್ನು ವಿವರಿಸಿದೆ. ಈ ಪತ್ರವನ್ನು ಎಪಿಡಿ ಫೌಂಡೇಶನ್ ಸಂವಹನ ವಿಭಾಗದ ಮುಖ್ಯಸ್ಥೆ ಮೇಗನ್ ಡಿಸೋಜಾ ಸಲ್ಲಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈ ವರ್ಷದ ಮಾರ್ಚ್ ತಿಂಗಳಲ್ಲಿ ತನ್ನ ಕರಡು ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ 2020) ಅಧಿಸೂಚನೆಯನ್ನು ಹೊರಡಿಸಿತ್ತು ಮತ್ತು ಎಲ್ಲ ಬಾಧ್ಯಸ್ಥರು ಮತ್ತು ಸಾರ್ವಜನಿಕರಿಂದ ಸಲಹೆಗಳು ಮತ್ತು ಶಿಫಾರಸುಗಳನ್ನು ಆಹ್ವಾನಿಸಿತ್ತು. ಪ್ರತಿಕ್ರಿಯೆ ಸ್ವೀಕರಿಸುವ ಕೊನೆಯ ದಿನಾಂಕ ಆಗಸ್ಟ್ 11 ರಂದು ಮುಕ್ತಾಯಗೊಂಡಿದೆ.

ಪ್ರತಿಷ್ಠಾನ ತನ್ನ ಪತ್ರದಲ್ಲಿ “ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಒಂದು ಪ್ರಮುಖ ಕಾನೂನು ಪ್ರಕ್ರಿಯೆಯಾಗಿದ್ದು, ಅದು ಹೊಸ ಯೋಜನೆಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆಯಿಂದಾಗುವ ದುಷ್ಪರಿಣಾಮಗಳಿಂದ ಜನರನ್ನು ಮತ್ತು ದೇಶದ ಜೀವವೈವಿಧ್ಯವನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣಾ ಕಾಯ್ದೆ 1986 ರ ಮೂಲ ಶಾಸನದಡಿಯಲ್ಲಿ ಸ್ಥಾಪಿಸಲಾದ ಇಐಎ ಪ್ರಕ್ರಿಯೆಯು ಪರಿಸರವನ್ನು ಸಂರಕ್ಷಿಸಲಾಗಿದೆ. ಹೊಸ ಪ್ರಸ್ತಾವಿತ ಬದಲಾವಣೆಗಳು ಮೂಲ ಕಾನೂನಿನ ಉದ್ದೇಶಕ್ಕೆ ಮಾರಕವಾಗಿರುತ್ತದೆ ಮಾತ್ರವಲ್ಲದೆ, ಇಐಎ 2006 ರ ನಿಬಂಧನೆಗಳನ್ನು ಕೂಡ ದುರ್ಬಲಗೊಳಿಸುತ್ತದೆ” ಎಂದು ಹೇಳಿದೆ.

ಪತ್ರದಲ್ಲಿ 83 ಪುಟಗಳ ಕರಡು ನೀತಿಯಲ್ಲಿ ಕಂಡು ಬರುವ ಕೆಲವು ಸಮಸ್ಯಾತ್ಮಕ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:

• ಸಾರ್ವಜನಿಕ ಸಮಾಲೋಚನೆ ಎಂಬ ಅಂಶವನ್ನು ಅಪ್ರಸ್ತುತವಾಗಿಸಿದೆ. ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಸಮಯವನ್ನು 30 ದಿನಗಳಿಂದ 20 ದಿನಗಳವರೆಗೆ ಮತ್ತು ಸಾರ್ವಜನಿಕ ವಿಚಾರಣೆಯನ್ನು 45 ದಿನಗಳಿಂದ 40 ದಿನಗಳವರೆಗೆ ಕುಗ್ಗಿಸಲಾಗಿದೆ. ಇದರ ಪರಿಣಾಮ ಸಂತ್ರಸ್ತರಾಗುವ ಜನರ ಧ್ವನಿಯನ್ನು ಉಡುಗಿಸಲಾಗುತ್ತದೆ.

• 40 ಯೋಜನೆಗಳಿಗೆ ಯಾವುದೇ ಪರಿಸರ ಅನುಮತಿ ಪಡೆಯುವುದರಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಗಣಿಗಾರಿಕೆಯಂತಹ ಯೋಜನೆಗಳು ಮಾನ್ಯತೆಯಲ್ಲಿ ವಿಸ್ತರಣೆಯನ್ನು ನೀಡಲಾಗುತ್ತದೆ (30 ವರ್ಷದಿಂದ 50 ವರ್ಷಗಳು). ಅಸ್ತಿತ್ವದಲ್ಲಿರುವ ಯೋಜನೆಗಳಿಗೆ 25% ಸಾಮರ್ಥ್ಯದ ವಿಸ್ತರಣೆಗೆ ಪರಿಷ್ಕೃತ ಇಐಎ ಅಗತ್ಯವಿಲ್ಲ. ಇವುಗಳು ಸರ್ಕಾರದ ಪರಿಸರ ಸಂರಕ್ಷಣಾ ಕ್ರಮಗಳಿಗೆ ಮಾರಕವಾಗಿರುತ್ತದೆ.

• ಯೋಜನಾ ಪ್ರವರ್ತಕರಿಗೆ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಕಡಿಮೆ ಮಾಡಲಾಗಿದೆ. ಈಗ ಆರು ತಿಂಗಳಿಗೊಮ್ಮೆ ಸಲ್ಲಿಸಬೇಕಾಗಿದ್ದ ಪರಿಸರ ಪಾಲನಾ ವರದಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ.

• ಇಐಎ 2020 ಕರಡು ನೀತಿಯು ಯೋಜನೆಗಳಿಗೆ ಘಟನೋತ್ತರ ಅನುಮೋದನೆ ಪಡೆಯಲು ಅವಕಾಶ ನೀಡುತ್ತದೆ. ಅರ್ಥಾತ್, ಕಾನೂನು ಬಾಹಿರವಾಗಿ ಯೋಜನೆಯನ್ನು ಪ್ರಾರಂಭಿಸಿ ನಂತರ ಅನುಮೋದನೆ ಪಡೆಯಲು ಅವಕಾಶ ನೀಡುತ್ತದೆ.

• ಯೋಜನೆಯಲ್ಲಿ ಆಗುವ ಕಾನೂನು ಉಲ್ಲಂಘನೆಗಳ ಬಗ್ಗೆ ಯೋಜನಾ ಪ್ರವರ್ತಕರು ಸ್ವಯಂ ವರದಿ ಮಾಡುವಿಕೆಗೆ ಒಳಪಟ್ಟಿರುತ್ತದೆ. ಇದು ಕೋಳಿಮನೆಯ ಕಾವಲಿಗೆ ನರಿಯನ್ನು ನಿಲ್ಲಿಸಿದಂತಾಗುತ್ತದೆ. ಕಾನೂನು ಉಲ್ಲಂಘನೆ ಮಾಡುವವರೇ ತಾವು ಉಲ್ಲಂಘನೆ ಮಾಡಿರುವುದರ ವರದಿ ಮಾಡುವುದನ್ನು ನಿರೀಕ್ಷಿಸಲಾಗುವುದಿಲ್ಲ. ಅನಂತರ ಸರಕಾರಿ ಅಧಿಕಾರಿಗಳು ಉಲ್ಲಂಘನೆಯನ್ನು ಪತ್ತೆ ಮಾಡಿದರೂ ಕೂಡ ತೀರ ಅಲ್ಪ ಮೊತ್ತವನ್ನು ದಂಡವನ್ನು ವಿಧಿಸಲಾಗುತ್ತದೆ. ಆದರೆ, ಒಮ್ಮೆ ಪರಿಸರದ ಮೇಲೆ ಮಾಡಲಾದ ಶಾಶ್ವತ ಹಾನಿಯನ್ನು ಸರಿಪಡಿಸಲಾಗುವುದಿಲ್ಲ ಎಂಬುದನ್ನು ಸರಕಾರ ಮನಗಾಣಬೇಕಾಗಿದೆ.

• ‘ಸ್ಟ್ರಾಟೆಜಿಕ್’ (ಕಾರ್ಯತಂತ್ರÀ) ವರ್ಗದ ಅಡಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕ ವಲಯದಲ್ಲಿ ಹಂಚಿಕೊಳ್ಳಲಾಗುವುದಿಲ್ಲ. ಸಾಮಾನ್ಯವಾಗಿ ರಕ್ಷಣಾ ವರ್ಗದ ಅಡಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದಿರುವುದು ಸಹಜ. ಈ ಲೋಪದೋಷವು ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧವಿಲ್ಲದ ಯೋಜನೆಗಳನ್ನು ಕೂಡ ‘ಸ್ಟ್ರಾಟೆಜಿಕ್’ ಎಂಬ ಪದ ಬಳಸಿ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಅನುಷ್ಠಾನ ಮಾಡಿ ದುರುಪಯೋಗ ಮಾಡಲು ಸ್ಥಾಪಿತ ಹಿತಾಶಕ್ತಿಗಳಿಗೆ ಅವಕಾಶ ನೀಡಬಹುದು.

ಈ ಮೇಲೆಕಂಡ ಲೋಪದೋಷಗಳಿಂದ ಕೂಡಿದ ಪ್ರಸ್ತಾವಿತ ಇಐಎ-2020 ಅನುಷ್ಠಾನಕ್ಕೆ ಬಂದರೆ ಅದು ನಮ್ಮ ದೇಶದ ಜನತೆ, ಭೂಮಿ ಮತ್ತು ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಏಕೆಂದರೆ, ಈ ಕರಡಿನಲ್ಲಿರುವ ಲೋಪದೋಷಗಳನ್ನು ಕೈಗಾರಿಕೆಗಳು, ಕಂಪೆನಿಗಳು ದುರ್ಬಳಕೆ ಮಾಡಲು ಅವಕಾಶ ವಿರುತ್ತದೆ. ಹಾಗೂ, ಇದರಿಂದಾಗಿ ದೇಶದಲ್ಲಿರುವ ಉಳಿದುಕೊಂಡಿರುವ ಅಲ್ಪಸ್ವಲ್ಪ ಹಸಿರು ಹೊದಿಕೆ ಕೂಡ ನಾಶವಾಗಲಿದೆ ಎಂದು ಎಪಿಡಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.

ದೇಶದ ಸಂವಿಧಾನದ ಆರ್ಟಿಕಲ್ 21, ಆರ್ಟಿಕಲ್ 48 ಎ ಮತ್ತು ಆರ್ಟಿಕಲ್ 51 (ಎ) (ಜಿ) ಅನ್ನು ಅನುಸರಿಸಿ ಕರಡನ್ನು ಮರು ರೂಪಿಸುವಂತೆ ಮತ್ತು ಅದನ್ನು ಬಲಪಡಿಸುವಂತೆ ಪ್ರತಿಷ್ಠಾನವು ಸರ್ಕಾರವನ್ನು ಒತ್ತಾಯಿಸಿದೆ. ನಮ್ಮ ಇಐಎ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ, ಅರ್ಥಪೂರ್ಣ ಮತ್ತು ವಿಶ್ವಾಸಾರ್ಹವಾಗಿರಬೇಕು. ಆಗ ಬಾಧ್ಯಸ್ಥಗಾರರ ಧ್ವನಿಗೂ ವೇದಿಕೆ ದೊರೆಯುತ್ತದೆ. ಸ್ಥಳೀಯ ವಸತಿ ಪ್ರಭೇದಗಳ ಜೀವವೈವಿಧ್ಯತೆಯ ಪ್ರದೇಶಗಳು ಸೇರಿದಂತೆ ನಮ್ಮ ದೇಶದ ಜೀವವೈವಿಧ್ಯದ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರಕಾರವನ್ನು ಪ್ರತಿಷ್ಠಾನ ಮನವಿ ಮಾಡಿದ್ದು, ಒಮ್ಮೆ ಕಳೆದುಹೋದ ನಮ್ಮ ನೈಸರ್ಗಿಕ ಪರಂಪರೆಯನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಕರಡು ನೀತಿಯಲ್ಲಿರುವ ಇರುವ ಆತಂಕಕಾರಿ ಲೋಪದೋಷಗಳನ್ನು ಹೊಗಲಾಡಿಸಲು ನೀವು ತಕ್ಷಣ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನೀವು ಈ ನಿಟ್ಟಿನಲ್ಲಿ ಕೈಗೊಳ್ಳುವ ಉತ್ತಮ ನಿರ್ಧಾರಗಳನ್ನು ಮುಂದಿನ ಹಲವು ತಲೆಮಾರಿನ ಜನರು ಕೃತಜ್ಞತೆಯಿಂದ ನೆನಪಿಸಿಕೊಳ್ಳುವರು ಎಂದು ಹೇಳಿ ಪತ್ರವನ್ನು ಮುಕ್ತಾಯ ಮಾಡಲಾಗಿದೆ.

ಎಲ್ಲ ಬಾಧ್ಯಸ್ಥರು ಎತ್ತಿರುವ ನಿಜವಾದ ಕಾಳಜಿಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ಭರವಸೆ ತಮಗಿದೆ ಎಂದಿರುವ ಎಪಿಡಿ ಪ್ರತಿಷ್ಠಾನ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್, ಬದಲಾವಣೆ ಮಾಡಲಾಗುತ್ತಿರುವ ನೀತಿಗಳು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪರಿಸರ ರಕ್ಷಣೆಯಲ್ಲಿ ಅನುಷ್ಠಾನಾತ್ಮಕ ಅಂಶಗಳನ್ನು ಹೊಂದಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.


Spread the love

Exit mobile version