ಹೋರಾಟಗಳಿಂದ ನಿರೀಕ್ಷಿತ ಫಲ ಸಾಧ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ

Spread the love

ಹೋರಾಟಗಳಿಂದ ನಿರೀಕ್ಷಿತ ಫಲ ಸಾಧ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ

  • ಮೂಡ್ಲಕಟ್ಟೆ : ರೈಲು ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಕುಂದಾಪುರ: ನಾವು ಬಯಸಿದ್ದನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಹೋರಾಟಗಳು ಸಹಜ. ಕೆಲವೊಮ್ಮೆ ಹೋರಾಟಗಳು ನಿರೀಕ್ಷಿತ ಫಲ ನೀಡದೆ ಇದ್ದಾಗ, ನಿರಾಸೆ ಆಗುವುದು ಸ್ವಾಭಾವಿಕ. ಆದರೆ ನಿರಂತರ ಹೋರಾಟದಿಂದ ಕುಂದಾಪುರದ ರೈಲು ನಿಲ್ದಾದಣದ ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಇಲ್ಲಿನ ಪ್ರಯಾಣಿಕರ ಹಿತ ರಕ್ಷಣೆ ಸಮಿತಿ ನಡೆಸುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರದ ರಾಘವೇಂದ್ರ ಜುವೆಲ್ಲರ್ಸ್ ಮಾಲಿಕರಾದ ವೆಂಕಟೇಶ್ ಶೇಟ್ ಕುಟುಂಬದಿಂದ ಕೊಡ ಮಾಡಿದ ಪ್ರಯಾಣಿಕರ ತಂಗುದಾಣ ಕುಟೀರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈಲ್ವೆ ನಿಲ್ದಾಣದ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ, ಹೊಸ ರೈಲುಗಳ ಹಾಗೂ ಪ್ರಸ್ತುತ ಇರುವ ರೈಲುಗಳ ನಿಲುಗಡೆ, ವೇಳಾಪಟ್ಟಿ ಸೇರಿದಂತೆ ಒಟ್ಟಾರೆ ಅಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಶೀಘ್ರವೇ ರೈಲು ಬಳಕೆದಾರರ ಸಭೆ ಕರೆಯುತ್ತೇನೆ. ಸರ್ಕಾರದ ಅನುದಾನ ಹಾಗೂ ಯೋಜನೆಯ ಜೊತೆ ಸಾರ್ವಜನಿಕ ಹಾಗೂ ಸಂಘ-ಸಂಸ್ಥೆಗಳ ಭಾಗೀಧಾರಿಕೆ ಇದ್ದಾಗ ಅಭಿವೃದ್ಧಿ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತದೆ. ಸ್ಥಳೀಯರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಯಾಣಿಕರ ತಂಗುದಾಣ ಕುಟೀರದ ದಾನಿ ವೆಂಕಟೇಶ್ ಶೇಟ್ ಅವರು, ಸಾರ್ವಜನಿಕರ ವ್ಯವಹಾರದಿಂದ ಉದ್ಯಮ ನಡೆಸುತ್ತಿರುವ ನಾವು, ದುಡಿಮೆಯ ಒಂದು ಪಾಲನ್ನು ಸಾರ್ವಜನಿಕ ಸೇವೆಗಾಗಿ ನೀಡಬೇಕು ಎನ್ನುವ ಸದುದ್ದೇಶವನ್ನು ಇರಿಸಿಕೊಳ್ಳಲಾಗಿದೆ. ಯಾರೇ ಸಾರ್ವಜನಿಕ ಸೇವೆ ಅಥವಾ ಕೊಡುಗೆಯನ್ನು ನೀಡಿದಾಗ ಅವರನ್ನು ಗೌರವಿಸುವ ಮನೋಭಾವ ಅತ್ಯಂತ ಸುತ್ಯರ್ಹವಾದುದು. ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಯವರ ಈ ತರದ ಮನೋಭಾವಗಳೇ ಇನ್ನಷ್ಟು ಜನರಿಗೆ ಪ್ರೇರಣೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ಗೀತಾ ವೆಂಕಟೇಶ್ ಶೇಟ್, ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರವೀಣ್ ಟಿ, ಸಮಿತಿಯ ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ ಬೈಲೂರು, ಜೋಯ್ ಕರ್ವೆಲ್ಲೊ, ಉದಯ್ ಭಂಡಾರ್‌ಕಾರ್, ತನ್ಮಯ್ ಭಂಡಾರ್‌ಕಾರ್, ರಾಘವೇಂದ್ರ ಶೇಟ್, ನಾಗರಾಜ್ ಆಚಾರ್ ಕೋಣಿ, ಸಂತೋಷ್ ಮೂಡ್ಲಕಟ್ಟೆ, ಅಭಿಜಿತ್ ಸಾರಂಗ್, ಕೊಂಕಣ ರೈಲ್ವೆಯ ಸೀನಿಯರ್ ಟ್ರಾಫಿಕ್ ವ್ಯವಸ್ಥಾಪಕ ದಿಲೀಪ್ ಭಟ್, ಅಧಿಕಾರಿಗಳಾದ ಎಸ್‌.ಕೆ.ಭಟ್, ಇಂಜಿನಿಯರ್ ವೆಂಕಟೇಶ್ ಇದ್ದರು.

ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಸ್ವಾಗತಿಸಿದರು, ಸಂಚಾಲಕ ವಿವೇಕ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.


Spread the love