ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿಗಳ ಬಂಧನ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕರಾಯದ ಕಲ್ಲೇರಿಯ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದಲ್ಲದೆ, ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ವಾರದೊಳಗೆ ಬೇಧಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಪರ್ವ ನಿವಾಸಿ ಉಮ್ಮರ್ ಫಾರೂಕ್, ಇರಾ ಗ್ರಾಮದ ತಾಳಿಪಡ್ಪು ನಿವಾಸಿ ಫಾರೂಕ್ ಹಾಗೂ ಪಾಣೆಮಂಗಳೂರು ಕೋಟೆ ನಿವಾಸಿ ಉಬೈದುಲ್ಲಾ ಬಂಧಿತ ಆರೋಪಿಗಳು.
ಮುಹಮ್ಮದ್ ಶಮೀರ್ ಅವರ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ ನ.8ರಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. ಬೆಂಕಿ ಹಚ್ಚಿದ್ದರಿಂದ ಅವರ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು. ಟಿಪ್ಪು ಜಯಂತಿ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆ ದ.ಕ. ಜಿಲ್ಲೆಗೆ ಕಾಲಿಟ್ಟ ಸಂದರ್ಭ ಅದಾಗಿದ್ದರಿಂದ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣ ಇದಾಗಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣವಿತ್ತಲ್ಲದೆ, ಕೋಮು ಗಲಭೆಗೂ ಕಾರಣವಾಗುವ ಸಾಧ್ಯತೆ ಇತ್ತು. ಆದರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಇನ್ನಿತರ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ್ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಎಂ. ಗೋಪಾಲ ನಾಯ್ಕರವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದಕುಮಾರ್, ಎಎಸ್ಐ ಶಿವಪ್ಪ ಪೂಜಾರಿ, ಸಿಬ್ಬಂದಿಗಳಾದ ಶೇಖರ ಗೌಡ, ದೇವದಾಸ್, ಸಂಗಯ್ಯ ಕಾಳೆ, ಹರೀಶ್ಚಂದ್ರ, ಪ್ರವೀಣ ರೈ, ಜಗದೀಶ್, ಇರ್ಷಾದ್, ಶ್ರೀಧರ್, ನಾರಾಯಣ, ಜಿಲ್ಲಾ ಗಣಕ ಯಂತ್ರ ಸಿಬ್ಬಂದಿ ಸಂಪತ್ ಮತ್ತು ದಿವಾಕರ್ ಹಾಗೂ ನೆಲ್ಯಾಡಿ ಹೊರಠಾಣಾ ಸಿಬ್ಬಂದಿ ಭಾಗವಹಿಸಿದ್ದಾರೆ.