ಉಡುಪಿ: ಉಡುಪಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಇವರ ಮಾರ್ಗದರ್ಶನದಲ್ಲಿ ಕಸ್ತೂರ್ಬಾ ಹಾಸ್ಪಿಟಲ್ ಸೂಪರಿಂಟೆಂಡೆಂಟ್ ಕರ್ನಲ್ ಎಂ ದಯಾನಂದ್ ಅವರ ಸಹಕಾರದೊಂದಿಗೆ ಹಿರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ‘ಅಂಗಾಂಗದಾನ ಜಿಲ್ಲೆ’ಯಾಗಿ ಉಡುಪಿಯನ್ನು ಇಂದು ಘೋಷಿಸಲಾಯಿತು.
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ಎಂ.ಸಿ ಮಣಿಪಾಲ, ಗಿಫ್ಟ್ ಯುವರ್ ಆರ್ಗನ್ ಫೌಂಡೇಶನ್ ಸಹಯೋಗದೊಂದಿಗೆ ಏರ್ಪಡಿಸಿದ್ದ ‘ಅಂಗದಾನ ಜನಜಾಗೃತಿ’ ಕಾರ್ಯಕ್ರಮವನ್ನು ಕರ್ನಲ್ ಎಂ ದಯಾನಂದ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ‘ಬ್ರೈನ್ ಡೆಡ್’(ಮೆದುಳು ನಿಷ್ಕ್ರಿಯ ನಿಗಾ ಸಮಿತಿ) ಸಮಿತಿಯನ್ನು ರಚಿಸಲಾಗಿದೆ. ಅಂಗಾಂಗ ಟ್ರಾನ್ಸ್‍ಪ್ಲಾಂಟೇಷನ್ ಕೌನ್ಸಿಲರ್‍ಗಳು ಇಬ್ಬರು ಈಗಾಗಲೇ ಇದ್ದು ಫೆಬ್ರವರಿ ಮೊದಲ ವಾರದಲ್ಲಿ ಇನ್ನಿಬ್ಬರು ಕೌನ್ಸಿಲರ್ ಗಳನ್ನು ನೇಮಿಸಲಾಗುವುದು.
ಈ ಸಂಬಂಧದ ನೀತಿ ನಿರೂಪಣೆಯನ್ನು ಸುಲಭಗೊಳಿಸಿ ಅಗತ್ಯ ದತ್ತಾಂಶಗಳೊಂದಿಗೆ ಸಮನ್ವಯಗೊಳಿಸಿ ಅರ್ಹರಿಗೆ ಅಂಗಾಂಗ ಲಭ್ಯವಾಗಿಸುವಂತೆ ಮಾಡುವುದೇ ಅಂಗಾಂಗದಾನ ಜಿಲ್ಲೆಯ ಘೋಷಣೆ. ಮುಂದಿನ ಹತ್ತು ವರ್ಷಗಳಲ್ಲಿ ಜಿಲ್ಲೆಯ ಜನತೆ ಈ ನಿಟ್ಟಿನಲ್ಲಿ ಮಾದರಿಯಾಗುವಂತೆ ಯೋಜನೆಯನ್ನು ರೂಪುಗೊಳಿಸಲಾಗಿದೆ ಎಂದು ಡಾ. ವಿಶಾಲ್ ಆರ್ ವಿವರಿಸಿದರು.
ಕೆ.ಎಂ.ಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಕರ್ನಲ್ ಡಾ. ದಯಾನಂದ್ ಕಾರ್ಯಕ್ರಮ ಉದ್ಘಾಟಿಸಿ ಅಂಗಾಂಗದಾನದಿಂದ ಹಲವರಿಗೆ ಜೀವದಾನವಾಗುವ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ರಕ್ತದಾನದ ಬಗ್ಗೆ ಜನ ಜಾಗೃತಿಗೊಂಡಿದ್ದು, ಅಂಗಾಂಗದಾನದ ಕುರಿತು ಜನರಲ್ಲಿ ಅರಿವು ಮೂಡಬೇಕಿದೆ ಎಂದರು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ಮಾತನಾಡಿ, ಪೊಲೀಸ್ ಇಲಾಖೆ ಜನರ ಪ್ರಾಣ ಉಳಿಸುವ ಜಿಲ್ಲಾಡಳಿತದ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಆಪರೇಷನ್, ಗಿಫ್ಟ್ ಯುವರ್ ಆರ್ಗನ್ ಫೌಂಡೇಶನ್ ಬೆಂಗಳೂರು ಇದರ ಡೈರೆಕ್ಟರ್ ಪ್ರಿಯಾಂಕ ಶೈಲೇಂದ್ರ ಅವರು ಅಂಗಾಂಗದಾನದ ಮಹತ್ವವನ್ನು ಹಾಗೂ ಈ ನಿಟ್ಟಿನಲ್ಲಿ ತಮ್ಮ ಸ್ವಯಂ ಸೇವಾ ಸಂಸ್ಥೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ರೆಡ್‍ಕ್ರಾಸ್‍ನ ಅಧ್ಯಕ್ಷರಾದ ಬಸ್ರೂರು ರಾಜೀವಶೆಟ್ಟಿ ಉಪಸ್ಥಿತರಿದ್ದರು.