ಅಂಗಾರರಿಗೆ ಸಚಿವ ಸ್ಥಾನ ನೀಡದೆ ಬಿಜೆಪಿ ದ್ರೋಹ ಬಗೆದಿದೆ – ಹಿಂದೂ ಮಹಾ ಸಭಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ನೇತೃತ್ವದ ಬಿ ಎಸ್ ಯಡಿಯೂರಪ್ಪನವರ ನೂತನ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡದಿರುವುದಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ ಮುಖ್ಯಮಂತ್ರಿ ಯಡಿಯೂರಪ್ಪನವರು ಜಾತಿ ಪಕ್ಷ ಸಂಘಟನೆ, ಪಕ್ಷನಿಷ್ಠೆ ಹಾಗೂ ಹಿರಿತನದ ಮಾನದಂಡದಲ್ಲಿ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿಕೆಯನ್ನು ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಯಾವ ರೀತಿಯಲ್ಲಿ ಹಿಂದಿದೆ ಎನ್ನುವುದಕ್ಕೆ ಹಾಗೂ ಜನತಾ ಪರಿವಾರದಿಂದ ಬಂದಿರುವ ಬಸವರಾಜ ಬೊಮ್ಮಾಯಿ, ಮಾಧು ಸ್ವಾಮಿ ಮತ್ತು ಇತರರ ಪಕ್ಷ ನಿಷ್ಠೆಯ ಬಗ್ಗೆ ಹಾಗೂ ಕೊಡುಗೆಯ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.
ಜಿಲ್ಲೆಯ 7 ಜನರು ಶಾಸಕರಾಗಿ ಆಯ್ಕೆಯಾಗಿರುವುದು ರಾಜ್ಯದಲ್ಲೇ ಬಿಜೆಪಿಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ ಜಿಲ್ಲೆಯಾಗಿದ್ದು ಅನೇಕ ಸಲ ಆಯ್ಕೆ ಆದ ಸುಳ್ಯ ಶಾಸಕ ಅಂಗಾರ ಅವರ ಹಿರಿತನಕ್ಕೆ ಹಾಗೂ ಪಕ್ಷ ನಿಷ್ಟೆಗೆ ಬಿಜೆಪಿ ನೀಡುತ್ತಿರುವ ಬೆಲೆ ಏನೆಂದು ದಕ ಜನತೆಗೆ ಬಿಜೆಪಿ ತಿಳಿಸಬೇಕು ಹಾಗೂ ದಕ ಜಿಲ್ಲಾ ಜನರಿಗೆ ಬಿಜೆಪಿ ನೀಡುವ ಗೌರವ ಏನೆಂದು ಜನತೆ ತಿಳಿದು ಕೊಳ್ಳಬೇಕು ಎಂದು ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದ್ದಾರೆ.
ಜಿಲ್ಲೆಯ ಯಾವುದೇ ಪ್ರಮುಖ ಬಿಜೆಪಿ ನಾಯಕರುಗಳು ಈ ಬಗ್ಗೆ ಧ್ವನಿಯೆತ್ತದೇ ಇರುವುದು ಜಿಲ್ಲೆಯ ಜನರಿಗೆ ಮಾಡಿದ ದೊಡ್ಡ ದ್ರೋಹವಾಗಿದೆ ಅಲ್ಲದೆ ಬಿಜೆಪಿಯ ದಲಿತ ವಿರೋಧಿ ನೀತಿಯು ಇದರಿಂದ ಸ್ಪಷ್ಟವಾಗುತ್ತದೆ.ಯಾವುದೇ ಪಕ್ಷದ ಸರಕಾರದ ಸಮಯದಲ್ಲಿ ಪ್ರತಿ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯು ತಿರಸ್ಕಾರಕ್ಕೆ ಒಳಗಾಗುತ್ತಿದ್ದು ಕೂಡಲೇ ಜಿಲ್ಲೆಯ ಹಿರಿಯ ನಾಯಕರಾದ ಅಂಗಾರರವರಿಗೆ ಮಂತ್ರಿ ಸ್ಥಾನವನ್ನು ನೀಡುವಂತೆ ಪಕ್ಷ ಆಗ್ರಹಿಸಿದೆ.