ಅಂಚೆ ಇಲಾಖೆಯ ಪ್ರತಿಯೊಂದು ವಿಷಯಗಳು ಸಾಹಿತ್ಯಕ್ಕೆ ಉತ್ತಮ ವಸ್ತುಗಳು: ರಾಜಶೇಖರ ಭಟ್
ಉಡುಪಿ: ‘ಅಂಚೆ ಇಲಾಖೆ ನೌಕರರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆ ವಲಯದಿಂದಲೂ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ಲಭಿಸುವಂತಾಗಲಿ’ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಉಡುಪಿ, ಮಣಿಪಾಲ, ಕುಂದಾಪುರ ಅಂಚೆ ಮನರಂಜನಾ ಕೂಟ ಸಹಯೋಗದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಭವಾನಿ ಮಂಟಪದಲ್ಲಿ ಭಾನುವಾರ ನಡೆದ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳೂ ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ. ಸಾಹಿತ್ಯಾಸಕ್ತಿಯಿಂದ ಮನಸ್ಸಿನ ನೆಮ್ಮದಿ ಸೇರಿದಂತೆ ವಿಶಾಲ ಮನೋಭಾವ ಬೆಳೆಸಿಕೊಳ್ಳಬಹುದು. ವ್ಯಕ್ತಿಯಲ್ಲಿ ಸೃಜನಶೀಲತೆ ಇದ್ದಾಗ ಮಾತ್ರ ಮಾನಸಿಕ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಅಂಚೆ ಸಮ್ಮೇಳನ ಒಂದು ವಿಶಿಷ್ಟ ಸಾಹಿತ್ಯ ಕಾರ್ಯಕ್ರಮವಾಗಿದ್ದು, ಪ್ರತಿವರ್ಷ ನಡೆಯುವಂತಾಗಲಿ’ ಎಂದು ಹೇಳಿದರು.
ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಅಂಚೆ ಇಲಾಖೆ ಪುರಾತನವಾದುದು. ಆಧುನಿಕ ತಂತ್ರಜ್ಞಾನದ ಈ ದಿನಗಳಲ್ಲೂ ಅಂಚೆ ಇಲಾಖೆಯನ್ನೇ ಜನತೆ ಅವಲಂಬಿಸಿದ್ದಾರೆ. ಕಾಲಾನುಕ್ರಮದ ಬದಲಾವಣೆಯೊಂದಿಗೆ ಅಂಚೆ ಇಲಾಖೆ ಜನಸೇವೆಯಲ್ಲಿ ನಿರತವಾಗಿದೆ ಎಂದರು.
ಜಿಲ್ಲಾ ಅಂಚೆ ಅಧೀಕ್ಷಕ ರಾಜಶೇಖರ ಭಟ್ ಮಾತನಾಡಿ, ‘ಅಂಚೆ ಇಲಾಖೆಯ ಪ್ರತಿಯೊಂದು ವಿಷಯಗಳು ಸಾಹಿತ್ಯಕ್ಕೆ ಉತ್ತಮ ವಸ್ತುಗಳಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ಅಂಚೆ ಅಣ್ಣ, ಅಂಚೆ ಕಚೇರಿ, ಅಂಚೆ ಗುಮಾಸ್ತ, ಅಂಚೆ ಪಾಲಕ, ಅಂಚೆ ಸಿಬ್ಬಂದಿ ಹೀಗೆ ಅಂಚೆ ಸುತ್ತ ಕಥೆ, ಕಾದಂಬರಿಗಳು ಉತ್ತಮ ಬಾಂಧವ್ಯ ಬೆಸೆದುಕೊಂಡಿವೆ. ಪೂರ್ಣಚಂದ್ರ ತೇಜಸ್ವಿ ಅವರ ‘ಅಬಚೂರಿನ ಪೋಸ್ಟಾಫೀಸು’, ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ನ ತಲುಪದ ಕಾಗದ, ದ್ವಾರಪಾಲಕನ ಉಡುಗೊರೆ ಸೇರಿದಂತೆ ಎಲ್ಲಾ ಕಥೆ, ಕಾದಂಬರಿಗಳಲ್ಲಿ ಅಂಚೆ ಕಚೇರಿ ವಿಷಯಗಳ ಪ್ರಸ್ತಾಪ ವಿಶೇಷವಾಗಿರುತ್ತದೆ. ಒಟ್ಟಾರೆ ಅಂಚೆ ಕೇಂದ್ರಿತ ವಿಚಾರಗಳು ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಭಾಗವಾಗಿವೆ’ ಎಂದರು.
ದಿನನಿತ್ಯದ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಸಾಹಿತ್ಯ, ಕ್ರೀಡೆ, ಹವ್ಯಾಸ, ಮನೋರಂಜನೆಗಳು ಮನಸ್ಸಿಗೆ ಮುದ ನೀಡುತ್ತವೆ. ಅದಕ್ಕಾಗಿ ಅಂಚೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ವೇಗದ ಯುಗದ ಈ ದಿನಗಳಲ್ಲಿ ಮಿಂಚಂಚೆ, ಗಣಕಯಂತ್ರ, ಮೊಬೈಲ್ ಇತ್ಯಾದಿಗಳು ಇದ್ದರೂ ಬಹುಕಾಲದ ದಾಖಲೀಕರಣದ ಮಾನ್ಯತೆ ಇರುವುದು ಅಂಚೆ ಇಲಾಖೆಗೆ ಮಾತ್ರ. ಅಂಚೆ ಅಣ್ಣನ ಚೀಲ ಅದ್ಭುತ ಸಾಹಿತ್ಯ ಹೂರಣ ತುಂಬಿದ ಕಣಜ. ಅದರಲ್ಲಿ ಸಂತಸ, ಸಂಭ್ರಮ, ವಿರಹ, ಪ್ರಣಯ, ನೋವು ನಲಿವಿನ ಸಂಗತಿಗಳೆಲ್ಲವೂ ಅಡಕವಾಗಿರುತ್ತವೆ. ಹಾಗಾಗಿಯೇ ಅಂಚೆ ಇಲಾಖೆಗೂ ಜನಮಾನಸಕ್ಕೂ ಅವಿನಾಭಾವ ಸಂಬಂಧ ಎಂದರು.
ಸುಧಾಕರ ಜಿ.ದೇವಾಡಿಗ, ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕುದಿ ವಸಂತ ಶೆಟ್ಟಿ, ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ, ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ರಾವ್ ಸ್ವಾಗತಿಸಿದರು. ಉಪ ಅಂಚೆ ಅಧೀಕ್ಷಕ ಹಾಗೂ ಸ್ವಾಗತ ಸಮಿತಿ ಉಪಾಧ್ಯಕ್ಷ ಜಯರಾಮ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಪ್ರಸ್ತಾವನೆ ಮಾಡಿದರು. ಉಪ ಅಂಚೆ ಅಧೀಕ್ಷಕ ಶ್ರೀನಾಥ ಬಸ್ರೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರದೀಪಕುಮಾರ್ ಕಲ್ಕೂರ ಅವರಿಗೆ ‘ಅಂಚೆ ಸಾಹಿತ್ಯ ಪುರಸ್ಕಾರ’ ಗೌರವ ನೀಡಲಾಯಿತು. ಬಳಿಕ ಅಂಚೆಪತ್ರಗಳ ಭಾವಲೋಕ, ಅಂಚೆ ಹಾಸ್ಯ ಲಾಸ್ಯ, ಅಂಚೆ ಕವಿಗೋಷ್ಠಿ ನಡೆಯಿತು.