ಅಂತಾರಾಷ್ಟ್ರೀಯ ವಿಶ್ವ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್‍ನ 10 ಮಂದಿ ಆಯ್ಕೆ

Spread the love

ಅಂತಾರಾಷ್ಟ್ರೀಯ ವಿಶ್ವ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್‍ನ 10 ಮಂದಿ ಆಯ್ಕೆ

ಮೂಡುಬಿದಿರೆ: ಇಟೆಲಿಯ ನೆಪೋಲಿಯದಲ್ಲಿ ಜು.3ರಿಂದ 14ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ವಿವಿಗಳ ಕ್ರೀಡಾಕೂಟಕ್ಕೆ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್‍ನ 10 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಇಲಾಕ್ಯ ದಾಸನ್ (400X100ರಿಲೇ), ಪ್ರವೀಣ್ ಸಿ(ತ್ರಿಪಲ್ ಜಂಪ್), ಅಭನಯ ಎಸ್.ಶೆಟ್ಟಿ (ಹೈಜಂಪ್), ಸುಪ್ರಿಯ ಎಸ್.( ಹೈಜಂಪ್), ಅಜೇಯ್ ಕುಮಾರ್ (5,000ಮೀಟರ್), ಕುಶ್‍ಮೇಶ್ ಕುಮಾರ್ (ಆಫ್ ಮ್ಯಾರಾಥಾನ್), ಅಭಿಷೇಕ್ ಡಿ (ಜಾವೆಲಿನ್ ತ್ರೋ), ನವಮಿ(4X100 ರಿಲೇ), ಚೌಹಾನ್ ಜ್ಯೋತಿ(3000ಮೀ ಸ್ಟಿಪಲ್ ಚೆಸ್), ಪುಷ್ಪಾಂಜಲಿ (100ಮೀ. ಹರ್ಡಲ್ಸ್) ಆಯ್ಕೆಯಾದ ಕ್ರೀಡಾಪಟುಗಳು.

ಈ ಬಾರಿ ಮಂಗಳೂರು ವಿವಿಯ ಆಶ್ರಯದಲ್ಲಿ ಜರಗಿದ 79ನೇ ಅಖಿಲ ಭಾರತ ಅಂತರ್ ವಿವಿಗಳ ಕ್ರೀಡಾಕೂಟದಲ್ಲಿ ಮಾಡಿದ ನಿರ್ವಹಣೆಯ ಆಧಾರದ ಮೇಲೆ ಈ ಕ್ರೀಡಾಪಟುಗಳು ಭಾರತೀಯ ವಿವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಒರಿಸ್ಸಾದ ಭುವನೇಶ್ವರದಲ್ಲಿರುವ ಕಳಿಂಗ ವಿವಿಯ ಆಶ್ರಯದಲ್ಲಿ ಕಳೆದ ಎಪ್ರಿಲ್‍ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿರುವುದರ ಮೂಲಕ ಭಾರತೀಯ ವಿವಿ ಒಕ್ಕೂಟ ಇವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿತ್ತು.
ಅಂತಾರಾಷ್ಟ್ರೀಯ ವಿವಿ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಮಂಗಳೂರು ವಿವಿಯು ಸಂಪೂರ್ಣ ಪ್ರೋತ್ಸಾಹವನ್ನು ನೀಡಿದ್ದು, ಕ್ರೀಡಾಪಟುಗಳಿಗೆ ತಲಾ 2,30,000 ರೂ. ನೀಡಿದ್ದು ಕ್ರೀಡಾಕೂಟದಲ್ಲಿ ಭಾಗವಹಿಸಲು ಸಂಪೂರ್ಣ ಸಹಕಾರವನ್ನು ನೀಡಿದೆ.

ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ ಮಂಗಳೂರು ವಿವಿ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರ ಹಾಗೂ ಈ ಕ್ರೀಡಾಪಟುಗಳನ್ನು ಸಂಯೋಜಿಸಿದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಕಿಶೋರ್ ಕುಮಾರ್ ಸಿ.ಕೆ ಅವರಿಗೆ ಧನ್ಯವಾದಗಳು ಎಂದು ಮೋಹನ ಆಳ್ವ ತಿಳಿಸಿದ್ದಾರೆ.

ಅಖಿಲ ಭಾರತ ಅಂತರ್ ವಿವಿಯ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದು ಇದೊಂದು ಹ್ಯಾಟ್ರಿಕ್ ಸಾಧನೆಯಾಗಿದೆ. ಅ.ಭಾ.ವಿವಿಯ ಕ್ರೀಡಾಕೂಟದ ಒಟ್ಟು 12 ಕೂಟ ದಾಖಲೆಗಳು ಮಂಗಳೂರು ವಿವಿಯ ಪರವಾಗಿ ದಾಖಲಾಗಿದ್ದು ಇವರೆಲ್ಲಾ ಆಳ್ವಾಸ್‍ನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಪಿಆರ್ ಒ ಪದ್ಮನಾಭ ಶೆಣೈ, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love