ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ಸಿಗೆ ದಲಿತರ ಮೇಲೆ ಪ್ರೀತಿ ಇಲ್ಲ- ವೇದವ್ಯಾಸ ಕಾಮತ್
ಮಂಗಳೂರು: ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ನಿರ್ಮಾಣಕ್ಕೆ 25 ಸೆಂಟ್ಸ್ ಜಾಗ ನೀಡಲು ಒತ್ತಾಯಿಸಿ ಅಂಗಡಿಗುಡ್ಡೆ-ಉರ್ವಾಸ್ಟೋರ್ ನ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ದೈವದ ಪೀಠಗಳನ್ನು ಅಲ್ಲದೆ ಶ್ರೀ ವೈದ್ಯನಾಥ ಯುವಕ ಮಂಡಲದ ಕಟ್ಟಡವನ್ನು ನೆಲಸಮಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಸೇವಾ ಸಮಿತಿ (ರಿ) ಅಂಗಡಿಗುಡ್ಡೆ-ಉರ್ವಾಸ್ಟೋರ್ ವತಿಯಿಂದ ಮೇ 22, ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಹೊರಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್, ಅಂಗಡಿಗುಡ್ಡೆಯಲ್ಲಿರುವ ಮೂರು ಎಕರೆ ಜಾಗದಲ್ಲಿ ಸುಮಾರು 50 ರಿಂದ 60 ಸೆಂಟ್ಸ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುವುದಾದರೆ, ಬಬ್ಬುಸ್ವಾಮಿ ದೈವಸ್ಥಾನದ ಜಾಗವನ್ನು ಬಿಟ್ಟು ಉಳಿದ ಜಾಗದಲ್ಲಿ ಭವನ ನಿರ್ಮಿಬಹುದಿತ್ತು. ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉರ್ವಾ ಮಾರ್ಕೆಟ್ ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಮಂಜೂರು ಮಾಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗ ಬಬ್ಬುಸ್ವಾಮಿ ದೈವಸ್ಥಾನ ಇರುವ ಜಾಗದಲ್ಲಿಯೇ ಭವನ ನಿರ್ಮಿಸಲು ಹಟ ಮಾಡುವುದ್ಯಾಕೆ ಎಂದು ಪ್ರಶ್ನಿಸಿದರು. ಜನರ ಧಾರ್ಮಿಕ ನಂಬಿಕೆಯೊಂದಿಗೆ ಆಟವಾಡಿ ಅಭಿವೃದ್ಧಿ ಎಂದು ಬೂಟಾಟಿಕೆ ಹೇಳುವ ರಾಜ್ಯ ಸರಕಾರ ತಾನು ಮಾಡಿದ್ದು ಸರಿಯಾ, ತಪ್ಪಾ ಎಂದು ಆತ್ಮವಿಮರ್ಸೆ ಮಾಡಿಕೊಳ್ಳಲಿ ಎಂದು ಅವರು ತಿಳಿಸಿದರು.
ದೇಶ ಕಂಡ ಮಹಾನ್ ಚೇತನ ಅಂಬೇಡ್ಕರ್ ಚುನಾವಣೆಗೆ ನಿಂತಾಗ ಅವರ ಎದುರು ಕಾಂಗ್ರೆಸ್ ತನ್ನ ಅಭ್ಯರ್ಥಿ ನಿಲ್ಲಿಸಿ, ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಆಗ ಜನಸಂಘ ಅಂಬೇಡ್ಕರ್ ಅವರನ್ನು ಬೆಂಬಲಿಸಿದ್ದನ್ನು ವೇದವ್ಯಾಸ್ ಕಾಮತ್ ನೆನಪಿಸಿಕೊಂಡರು. ಅಂಬೇಡ್ಕರ್ ನಿಧನರಾದಾಗ ಅವರ ಅಂತ್ಯ ಸಂಸ್ಕಾರ ದೆಹಲಿಯಲ್ಲಿ ಮಾಡಲು ಬಿಡದೆ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಿದ ಆಗಿನ ಕಾಂಗ್ರೆಸ್ ಸರಕಾರ ಈಗ ದಲಿತರ ಬಗ್ಗೆ ಚುನಾವಣೆ ಬಂದಾಗ ಪ್ರೀತಿಯ ನಾಟಕವಾಡುತ್ತಿರುವುದನ್ನು ಮಂಗಳೂರಿನ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಎಂದು ತಿಳಿಸಿದರು.