Home Mangalorean News Kannada News ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಗೊಳಿಸಲು ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಗೊಳಿಸಲು ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

Spread the love

ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಗೊಳಿಸಲು ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ

ಮಂಗಳೂರು : ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ಕಾಮಗಾರಿಯನ್ನು ತ್ವರಿತಗೊಳಿಸಿ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರಿನ ಉರ್ವಾಸ್ಟೋರ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನಕ್ಕೆ ರಾಜ್ಯ ಸರಕಾರದಿಂದ 12 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಅಂತಿಮ ಘಟ್ಟದಲ್ಲಿದೆ. ಆಗಸ್ಟ್ 15ರಂದು ಇದರ ಉದ್ಘಾಟನೆಗೆ ಪೂರ್ವ ತಯಾರಿ ನಡೆಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಯೋಗೀಶ್ ಮಾತನಾಡಿ, ಅಂಬೇಡ್ಕರ್ ಭವನದ ಸಮಗ್ರ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚನೆಯಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲಾಗುವುದು. ಕಡಬ ತಾಲೂಕು ಕೇಂದ್ರದಲ್ಲಿ ರೂ. 1.5 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದೌರ್ಜನ್ಯ ಪ್ರಕರಣಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ದೌರ್ಜನ್ಯ ಪ್ರಕರಣಗಳ ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪರೋಕ್ಷವಾಗಿಯೂ ಯಾವುದೇ ಕಿರುಕುಳ, ಮಾನಸಿಕ ತೊಂದರೆಯಾಗದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಕಚೇರಿ ಮುಖ್ಯಸ್ಥರು ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಅಲೆಮಾರಿ ಜನಾಂಗದವರಿಗೆ ಸೌಲಭ್ಯಗಳನ್ನು ಮುತುವರ್ಜಿಯಿಂದ ನೀಡಬೇಕು ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು. ದುರ್ಬಲ ವರ್ಗದವರಿಗೆ ಮೀಸಲಾದ ಡಿ.ಸಿ. ಮನ್ನಾ ಭೂಮಿಗಳ ಒತ್ತುವರಿಯನ್ನು ಕಾಲಮಿತಿಯೊಳಗೆ ತೆರವುಗೊಳಿಸಬೇಕು. ಈ ಬಗ್ಗೆ ಎಲ್ಲಾ ತಹಶೀಲ್ದಾರ್‍ಗಳನ್ನು ಗಮನಹರಿಸಿ, ಜುಲೈ ಅಂತ್ಯದೊಳಗೆ ವರದಿ ನೀಡಲು ಅವರು ತಿಳಿಸಿದರು.

ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ಪ್ರಸನ್ನ ಕುಮಾರ್, ಡಿ.ಸಿ.ಪಿ. ಹನುಮಂತರಾಯ, ಎಎಸ್‍ಪಿ ವಿಕ್ರಂ, ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ್, ದಲಿತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love

Exit mobile version