ಅಕಾಡೆಮಿಗಳಿಗೆ ನೇಮಕ ಕ್ರೈಸ್ತ ಕೊಂಕಣಿಗರಿಗೆ ಸರಕಾರದಿಂದ ಅನ್ಯಾಯ – ಐವನ್ ಡಿಸೋಜಾ
ಮಂಗಳೂರು: ರಾಜ್ಯದ 16 ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಸರ್ಕಾರ ನೇಮಕ ಮಾಡಿದ ಒಟ್ಟು 250 ಸದಸ್ಯರಲ್ಲಿ ಕ್ರೈಸ್ತ ಕೊಂಕಣಿ ಭಾಷಿಕ ಸಮುದಾಯದ ಒಬ್ಬರಿಗೂ ಸದಸ್ಯ ಸ್ಥಾನವನ್ನು ನೀಡಿಲ್ಲ. ಕ್ರೈಸ್ತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಸಿದರು.
ಕ್ರಿಶ್ಚಿಯನ್ ಸಮುದಾಯದವರಿಗೆ ರಾಜ್ಯ ಸರ್ಕಾರ ಮಾಡಿದ ಅನ್ಯಾಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಮುಂದಿನ 15 ದಿನದೊಳಗೆ ಸರಿಪಡಿಸಬೇಕು. ಇಲ್ಲದೇ ಇದಲ್ಲಿ ಸಮುದಾಯದ ಮುಖಂಡರು, ಸಾಹಿತಿಗಳೊಂದಿಗೆ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಒಟ್ಟು ಜನಸಂಖ್ಯೆಯ ಶೇ.4ರಷ್ಟು ಕ್ರಿಶ್ಚಿಯನ್ ಸಮುದಾಯವರಿದ್ದರೂ ಒಂದೇ ಒಂದು ಸದಸ್ಯತ್ವ ನೀಡದಿರುವುದು ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಸಂಚಾಗಿದೆ. ರಾಜ್ಯದಲ್ಲಿ ಕೊಂಕಣಿ ಭಾಷೆ ಮಾತನಾಡುವ 41 ಸಮುದಾಯಗಳ ಒಟ್ಟು ಜನಸಂಖ್ಯೆಯ ಶೇ.50ಕ್ಕೂ ಅಧಿಕ ಕ್ರಿಶ್ಚಿಯನ್ನರೇ ಇದ್ದಾರೆ. ರಾಜ್ಯದ 11 ಧರ್ಮಪ್ರಾಂತಗಳ ಪೈಕಿ 4 ಧರ್ಮಪ್ರಾಂತಗಳಲ್ಲಿ ಪೂಜೆಯಿಂದ ಹಿಡಿದು ಶಿಕ್ಷಣದವರೆಗೆ ಕೊಂಕಣಿಯೇ ಅಧಿಕೃತ ಭಾಷೆಯಾಗಿದೆ. ಕೊಂಕಣಿ ಸಾಹಿತ್ಯಕ್ಕೆ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಹಾಗಿದ್ದರೂ ಕಡೇ ಪಕ್ಷ ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲೂ ಕ್ರೈಸ್ತ ಸಮುದಾಯಕ್ಕೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ ಎಂದು ಐವನ್ ಡಿಸೋಜ ಹೇಳಿದರು.
ಕೊಂಕಣಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು ಕ್ರೈಸ್ತ ಕೊಂಕಣಿಗರು. ಎಲ್ಲೆಡೆ ಕ್ರೈಸ್ತ ಕೊಂಕಣಿ ಸಾಹಿತಿಗಳು ಇರುವಾಗ ರಾಜ್ಯ ಸರ್ಕಾರಕ್ಕೆ ಒಬ್ಬರೂ ಕಾಣಿಸಲಿಲ್ಲವೇಕೆ? ಸಾಹಿತ್ಯದ ವಿಚಾರದಲ್ಲೂ ರಾಜಕೀಯ ಬೆರೆಸುವುದು ಸರಿಯಲ್ಲ. ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲೂ ಕ್ರೈಸ್ತ ಕೊಂಕಣಿಗರಿದ್ದಾರೆ ಎನ್ನುವುದನ್ನು ಮರೆಯದಿರಲಿ. 1994 ರಲ್ಲಿ ಆರಂಭವಾದ ಕೊಂಕಣಿ ಅಕಾಡೆಮಿಯಲ್ಲಿ ಈವರೆಗಿನ 9 ಅಧ್ಯಕ್ಷರ ಪೈಕಿ ನಾಲ್ವರು ಕ್ರಿಶ್ಚಿಯನ್ ಕೊಂಕಣಿ ಸಮುದಾಯದವರೇ ಆಗಿದ್ದರು. ಆದರೆ, ಈ ಬಾರಿ ಯಾರಿಗೂ ಸಿಕ್ಕಿಲ್ಲ ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.