Home Mangalorean News Kannada News ಅಕಾಡೆಮಿಗಳ ಅನುದಾನ ಒಂದು ಕೋಟಿ ರೂ.ಗೆ ಹೆಚ್ಚಿಸಲು ಪ್ರಸ್ತಾವನೆ : ಸಚಿವ ಯು.ಟಿ. ಖಾದರ್

ಅಕಾಡೆಮಿಗಳ ಅನುದಾನ ಒಂದು ಕೋಟಿ ರೂ.ಗೆ ಹೆಚ್ಚಿಸಲು ಪ್ರಸ್ತಾವನೆ : ಸಚಿವ ಯು.ಟಿ. ಖಾದರ್

Spread the love

ಅಕಾಡೆಮಿಗಳ ಅನುದಾನ ಒಂದು ಕೋಟಿ ರೂ.ಗೆ ಹೆಚ್ಚಿಸಲು ಪ್ರಸ್ತಾವನೆ : ಸಚಿವ ಯು.ಟಿ. ಖಾದರ್

ಬ್ಯಾರಿ ಸೇರಿದಂತೆ ಅಕಾಡೆಮಿಗಳ ಅನುದಾನವನ್ನು 70 ಲಕ್ಷ ರೂ.ನಿಂದ ಒಂದು ಕೋಟಿ ರೂ.ಗೆ ಹೆಚ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ ಇದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಪೆರ್ನಾಲ್ ಸಂದೋಲ’ ಮತ್ತು ‘ಕಿನಾದಿ’ ಬ್ಯಾರಿ ಘಝಲ್ ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಬ್ಯಾರಿ ಕ್ಯಾಸೆಟ್ ಬಿಡುಗಡೆ ಮಾಡಲು ಹಣವೂ ಇಲ್ಲದೆ, ಜಾಗವೂ ಇಲ್ಲದೆ ಕಷ್ಟಪಡುವ ಪರಿಸ್ಥಿತಿ ಇತ್ತು. ನಂತರ ಬ್ಯಾರಿ ಸಾಹಿತ್ಯ ಪರಿಷತ್ ಮತ್ತಿತರ ಸಂಘಟನೆಗಳ ಮೂಲಕ ಸುಧಾರಣೆ ಆಯಿತು. ಈಗ ಅಕಾಡೆಮಿ ನೇತೃತ್ವದಲ್ಲಿ ಹಲವು ಅತ್ಯುತ್ತಮ ಕಾರ್ಯಕ್ರಮ ಆಗುತ್ತಿವೆ. ಬ್ಯಾರಿ ಗಝಲ್ ಮೂಲಕ ಬ್ಯಾರಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲು ತಲುಪಿದಂತಾಗಿದೆ. ಸಂಗೀತಕ್ಕೆ ಜಾತಿ, ಧರ್ಮದ ಹಂಗಿಲ್ಲ. ಕೊಡುಕೊಳ್ಳುವಿಕೆ ಮೂಲಕ ಸಾಹಿತ್ಯ ಕ್ಷೇತ್ರ ವಿಸ್ತಾರಗೊಳ್ಳಬೇಕು ಎಂದು ಸಚಿವರು ಹೇಳಿದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮದ್ ಅಧ್ಯಕ್ಷತೆ ವಹಿಸಿ, ಒಂದೂವರೆ ವರ್ಷದಲ್ಲಿ ಅಕಾಡೆಮಿ ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಿದೆ. ಇಂದು ಗಝಲ್ ಸಿಡಿ ಬಿಡುಗಡೆ ಮಾಡಿದ್ದು, ಇನ್ನೊಂದು ಮಹತ್ವದ ಯೋಜನೆಯಾಗಿ ಬ್ಯಾರಿ ವ್ಯಾಕರಣ ಗ್ರಂಥ ಶೀಘ್ರ ಬಿಡುಗಡೆ ಮಾಡಲಿದೆ ಎಂದು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಅಬ್ಬಾಸ್ ಅಲಿ, ಗಾಯಕ ಮುಹಮ್ಮದ್ ಹನೀಫ್ ಉಪ್ಪಳ ಶುಭ ಹಾರೈಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಗಾಯಕ ಠಾಗೂರ್ ದಾಸ್ ಉಪಸ್ಥಿತರಿದ್ದರು.

ಸಿಡಿ ನಿರ್ಮಾಣದ ಕಲಾವಿದರಾದ ಮುಹಮ್ಮದ್ ಬಡ್ಡೂರು, ಠಾಗೂರ್ ದಾಸ್, ಪದ್ಮಿನಿ ನಾಯಕ್, ಸುಹೈಲ್ ಬಡ್ಡೂರ್, ಪುರುಷೋತ್ತಮ್ ಕೊಪ್ಪಲ್, ಶಿನೋಯ್ ವಿ.ಜೋಸೆಫ್ ಮತ್ತಿತರರನ್ನು ಸನ್ಮಾನಿಸಲಾಯಿತು.

ಬ್ಯಾರಿ ಅಕಾಡೆಮಿ ಸದಸ್ಯ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಹುಸೈನ್ ಕಾಟಿಪಳ್ಳವಂದಿಸಿದರು. ಕಾರ್ಯಕ್ರಮದ ಬಳಿಕ ಠಾಗೂರ್ ದಾಸ್ ಅವರಿಂದ ಬ್ಯಾರಿ ಗಝಲ್ ಕಾರ್ಯಕ್ರಮ ನಡೆಯಿತು.


Spread the love

Exit mobile version