Home Mangalorean News Kannada News ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

Spread the love

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ ಕಲಾಕೇಂದ್ರದ ಮೂಲಕ ಧನಸಹಾಯ ನೀಡಿ ಆದರ್ಶ ಮೆರೆದದ್ದು, ಕಟಪಾಡಿ ರವಿ ಅನಾರೋಗ್ಯ ಪೀಡಿತ ಬಡ ಮಕ್ಕಳಿಗಾಗಿ ವೇಷ ಹಾಕಿ ಧನ ಸಹಾಯ ನೀಡುತ್ತಿರುವುದನ್ನು ಕಂಡು ತಾನೂ ಕೂಡ ತನ್ನ ವೈಯುಕ್ತಿಕ ಹಣ ನೀಡಿದ್ದು ಇತಿಹಾಸ ಆದರೆ ಅಂತಹುದೇ ಇನ್ನೊಂದು ರೀತಿಯ ಆದರ್ಶತೆಗೆ ಸಾಕ್ಷಿಯಾಗಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾ ಪೋಲಿಸ್ ಅಧಿಕಾರಿ ಕಛೇರಿಗೆ ಪ್ರೇಮ ವಿವಾಹ ಪ್ರಕರಣ ಮೆಟ್ಟಿಲೇರಿದ್ದು, ತನ್ನ ಹಿರಿಯ ಸಹೋದರಿ ಪ್ರೀತಿಸಿದವನ ಜೊತೆ ಹೊರಟುನಿಂತ ಪರಿಣಾಮ ಒಬ್ಬಂಟಿಯಾದ ಮತ್ತೋರ್ವ ಯುವತಿಗೆ ಅಣ್ಣನ ಸ್ಥಾನದಲ್ಲಿ ನಿಂತು ಅಭಯ ನೀಡುವ ಮೂಲಕ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಮತ್ತೋಮ್ಮೆ ಆದರ್ಶ ಮೆರೆದಿದ್ದಾರೆ.

ಯುವತಿಯ ಮನೆಯವರ ವಿರೋಧದ ಕಾರಣಕ್ಕೆ ಪ್ರೇಮ ವಿವಾಹ ಪ್ರಕರಣ ಎಸ್ಪಿ ಕಚೇರಿಗೆ ಬಂದಿದ್ದು, ಪ್ರೀತಿಸಿದ ಪ್ರಿಯಕರನೊಂದಿಗೆ ವಿವಾಹವಾಗಲು ಹೊರಟು ನಿಂತ ಯುವತಿ ಒಂದೆಡೆಯಾದರೆ, ಇತ್ತ ನನ್ನನ್ನು ತೊರೆದು ಹೋಗಬೇಡ ಎಂದು ಅಂಗಲಾಚುತ್ತಿರುವ ಆಕೆಯ ಕಿರಿಯ ಸಹೋದರೆ. ಕಾನೂನನ್ನು ಮೀರಿ ಯಾರ ಪರವಾಗಿ ನಿಂತು ತೀರ್ಮಾನವನ್ನು ತೆಗೆದುಕೊಳ್ಳಲಾಗದ ಸಂದಿಗ್ದತೆಯನ್ನು ಎಸ್ಪಿ ಅಣ್ಣಾಮಲೈ ಎದುರಿಸಿದರು.

ಪ್ರಾಪ್ತ ವಯಸ್ಸಿನ ಪ್ರೇಮಿಗಳ ಮದುವೆಯನ್ನು ಬಲವಂತಾಗಿ ಮುರಿಯಲು ಕಾನೂನಿ ಪ್ರಕಾರ ಅವಕಾಶ ಇಲ್ಲ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಆಕ್ಕನ ಆಸರೆಯಲ್ಲಿ ಬೆಳೆದ ಸಹೋದರಿ ಆಕ್ಕ ನನ್ನಿಂದ ದೂರಾಗಬೇಡ. ನಾನು ಧರಿಸಿರುವ ಪಾದರಕ್ಷೆಯಿಂದ ಹಿಡಿದು ಹಣೆ ಬೊಟ್ಟಿನವರೆಗೆ ಎಲ್ಲವೂ ನೀನು ಕೊಡಿಸಿರುವೆ. ಈಗ ನೀ ದೂರಾದರೆ ನನ್ನ ವಿದ್ಯಾಭ್ಯಾಸದ ಗತಿಯೇನು ಎಂದು ಗೋಗರೆದರೂ ಅಕ್ಕ ಓಗೊಡಲಿಲ್ಲ. ಇಂತಹ ಕರುಳು ಕಿವುಚುವ ಪರಿಸ್ಥಿತಿಯನ್ನು ಕಂಡು ಮರುಗಿದ ಎಸ್ಪಿ ಅಣ್ಣಾಮಲೈ, ಅಂತಿಮವಾಗಿ ಸಹೋದರಿಯ ನೆರವಿಗೆ ನಿಂತರು.

ನಿನ್ನ ಅಕ್ಕ ಪ್ರೀತಿಸಿ ಮದುವೆಯಾದರೆಂಬ ಕಾರಣಕ್ಕೆ ನೀನು ಒಂಟಿಯಾದೆನೆಂದು ಹೆದರಬೇಡ. ನಿನ್ನ ವಿದ್ಯಾಭ್ಯಾಸ ಮುಗಿಯುವವರೆಗೆ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ. ನಂತರ ಕೆಲಸಕ್ಕೆ ಸೇರಿಸುವ ಜವಾಬ್ದಾರಿ ನನ್ನದು. ಆಮೇಲೆ ನಿನ್ನ ದಾರಿ ನೋಡಿಕೋ ಎಂದು ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಪೊಲೀಸ್ ಸಿಬ್ಬಂದಿ, ಹುಡುಗಿ ಕಡೆಯವರು ಹಾಗೂ ಪತ್ರಕರ್ತಕರ ಕಣ್ಣುಗಳು ಕೂಡ ತೇವಗೊಂಡವು. ಒಟ್ಟಾರೆಯಾಗಿ ಮಾನವೀಯತೆಯಿಂದ ತೆಗೆದುಕೊಂಡ ನಿರ್ಧಾರದಲ್ಲಿ ಕಾನೂನಿಗೂ ಮೀರಿದ ಸಾಂತ್ವನ ಸಿಗುತ್ತದೆ ಎನ್ನುವುದನ್ನು ಎಸ್ಪಿ ನಿರೂಪಿಸಿದರು. ಈ ಮೂಲಕ ಆದರ್ಶ ಅಧಿಕಾರಿ ಎನಿಸಿಕೊಂಡರು.


Spread the love

Exit mobile version