ಅಕ್ಟೋಬರ್ 4-5ರಂದು ತೈಲ ಮಾಲಿನ್ಯ ತಡೆ ಕಾರ್ಯಾಚರಣೆ
ಮಂಗಳೂರು:ಅಕ್ಟೋಬರ್ 4ಮತ್ತು 5ರಂದು ಪಣಂಬೂರು ಬೀಚ್‍ನಲ್ಲಿ ತೈಲ ಮಾಲಿನ್ಯ ತಡೆ ಸಂಬಂಧ ಅಣಕು ಪ್ರದರ್ಶನ ನಡೆಯಲಿದೆ. ಈ ಸಂದರ್ಭದಲ್ಲಿ ನಾಗರೀಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಅವರಿಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‍ನಲ್ಲಿ ಅಯೋಜಿಸಲಾದ ಈ ಸಂಬಂಧದ ಪೂರ್ವಭಾವಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೋಸ್ಟ್‍ಗಾರ್ಡ್‍ನವರ ಮುಂದಾಳತ್ವದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರಾದೇಶಿಕ ಮಟ್ಟದ ತೈಲ ಮಾಲಿನ್ಯ ಸರ್ವೇಕ್ಷಣ ಅಣಕು ಪ್ರದರ್ಶನ ಆಯೋಜಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ವಿವಿಧ ಅಧಿಕಾರಿಗಳ ಹೊಣೆಯನ್ನು ನಿಗದಿಪಡಿಸಿದ ಅವರು, ಸಹಾಯಕ ಆಯುಕ್ತರು ವಿಕೋಪ ನಿರ್ವಹಣಾಧಿಕಾರಿಯಾಗಿರುತ್ತಾರೆ. ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವರು. ಫ್ಯಾಕ್ಟರೀಸ್‍ನ ಉಪನಿರ್ದೇಶಕರು, ಅಗ್ನಿಶಾಮಕ ಪಡೆಯ ಮುಖ್ಯಸ್ಥರು, ಹೋಮ್ ಗಾಡ್ರ್ಸನವರು, ನಿರ್ವಹಿಸಬೇಕಾದ ಕರ್ತವ್ಯಗಳನ್ನು ಸಭೆಯಲ್ಲಿ ಹಂಚಿಕೆ ಮಾಡಲಾಯಿತು.
ಸಂಚಾರ ಮತ್ತು ಸುರಕ್ಷೆಯ ಹೊಣೆಯನ್ನು ಪೊಲೀಸ್ ಇಲಾಖೆಗೆ, ಮೀನುಗಾರರ ಸಂಘಟನೆಗಳ ಸಹಕಾರ ಪಡೆಯಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆ ನೆರವು ನೀಡಲು ಸಜ್ಜಾಗುವಂತೆ ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಕೋಸ್ಟ್‍ಗಾರ್ಡ್‍ನ ಅಧಿಕಾರಿಗಳು ಉಪಸ್ಥಿತರಿದ್ದರು.