ಅಕ್ಟೋಬರ್ 5ಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ: ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ!
ಬೆಂಗಳೂರು: ಅಕ್ಟೋಬರ್ ತಿಂಗಳಿನಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿದ್ದು, ತಾವು ನೀಡಿದ್ದ ಭರವಸೆಯಂತೆ ಎಂಎಲ್ ಸಿ ಗಳಾದ ಆರ್.ಶಂಕರ್, ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
2019ರ ಜುಲೈ ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರಿಗೆ ಸಿಎಂ ನೀಡಿದ್ದ ಭರವಸೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸೆಪ್ಟಂಬರ್ 17ರವರೆಗೆ ಸಂಪುಟ ವಿಸ್ತರಣೆ ನಡೆಯುವುದಿಲ್ಲ, ಅಶ್ವಿನ್ ಅಮಾವಾಸ್ಯೆ ನಂತರ ಮಾತ್ರ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ, ಸೆಪ್ಟಂಬರ್ 21ರಿಂದ 30 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ, ಸದನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ಅಧಿವೇಶನದ ನಂತರ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಪಟ್ಟಿ ಅಂತಿಮಗೊಳಿಸಲಿದ್ದಾರೆ, ಅದಾದ ನಂತರ ಅಂದರೆ ಅಕ್ಟೋಬರ್ 5 ರಂದು ಸಂಪುಟ ವಿಸ್ತರಣೆ ನಡೆಯಲಿದೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬೆಂಗಳೂರಿಗೆ ಆಗಮಿಸಿದ್ದು, ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದರು. ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಾಲೋಚಿಸಿದ್ದರು.
90 ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗಳು ಖಾಲಿಯಿದ್ದು 400-500 ಮಂದಿ ಆಕಾಂಕ್ಷಿಗಳಿದ್ದಾರೆ, ಪಕ್ಷವೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿರುವುದರಿಂದ ಸರ್ಕಾರ ಯಾವುದೇ ನೇಮಕಾತಿ ಮಾಡಲು ಏನೂ ಉಳಿದಿಲ್ಲ, ಶೇ. 50 ರಷ್ಟು ಸ್ಥಾನಗಳನ್ನು ಭರ್ತಿ ಮಾಡಲು ತನ್ನ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಸರ್ಕಾರ ಪಕ್ಷವನ್ನು ಒತ್ತಾಯಿಸಿದೆ.
ಸಂಪುಟ ವಿಸ್ತರಣೆ ವಿಷಯ ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ಗೆ ಬಿಟ್ಟದ್ದು, ಸಿಎಂ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.