ಅಕ್ಟೋಬರ್ 6ರಂದು ಬಿಜೆಪಿ ವತಿಯಿಂದ ಪೌರಯುಕ್ತ ಮಂಜುನಾಥಯ್ಯ ಹಠಾವೋ ಆಂದೋಲನ: ರಘುಪತಿ ಭಟ್
ಉಡುಪಿ: ಉಡುಪಿ ನಗರಸಭೆಯಲ್ಲಿ ಪೌರಾಡಳಿತ ನಿಯಮಗಳನ್ನು ಮೀರಿ ವರ್ತಿಸುತ್ತಿರುವ ಪೌರಾಯುಕ್ತ ಡಿ. ಮಂಜುನಾಥಯ್ಯ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಉಡುಪಿ ನಗರ ಬಿಜೆಪಿ ವತಿಯಿಂದ ಅಕ್ಟೋಬರ್ 6 ರಂದು ಪೌರಾಯುಕ್ತ ಮಂಜುನಾಥಯ್ಯ ಹಠಾವೋ ಆಂದೋಲನ ಚಳುವಳಿಯನ್ನು ಹಮ್ಮಿಕೊಂಡಿದೆ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಹೇಳೀದ್ದಾರೆ.
ಅವರು ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಉಡುಪಿ ನಗರಸಭೆಯಲ್ಲಿ ಪೌರಯುಕ್ತರಾಗಿ ಕಳೆದ 3 ವರ್ಷಗಳಿಂದ ಸೇವೆ ಮಾಡುತ್ತಿದ್ದು ನಗರಸಭೆಯಲ್ಲಿ ವ್ಯಾಪಕವಾದ ಬೃಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಪ್ರತಿಯೊಂದು ಚಿಕ್ಕ ಕೆಲಸಕ್ಕೂ ಕೂಡ ಲಂಚ ನೀಡುವ ಪರಿಸ್ಥಿತಿ ಜನರಿಗೆ ಒದಗಿ ಬಂದಿದೆ. ಪೌರಾಯುಕ್ತರಾಗಿ ಎಲ್ಲಾ ಪಕ್ಷಗಳನ್ನು ಸಮಾನವಾಗಿ ಕಾಣುವ ಬದಲು ಕೇವಲ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ಅವರು ವರ್ತಿಸುತ್ತಿದ್ದಾರೆ.
ಹಿಂದೆಲ್ಲಾ ಉಡುಪಿ ನಗರಸಭೆಯ ಅಧಿವೇಶನ ನೋಡಲು ಬೇರೆ ನಗರಸಭೆಗಳಿಂದ ಸದಸ್ಯರು ಬರುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ನಗರಸಭೆಯಲ್ಲಿ ಕೇವಲ ಗದ್ದಲ ಬಿಟ್ಟರೆ ಸಭೆಯೇ ನಡೆಯುತ್ತಿಲ್ಲ ಇದಕ್ಕೆ ಆಡಳಿತ ಪಕ್ಷದವರ ಜೊತೆ ಪೌರಾಯುಕ್ತರ ಜವಾಬ್ದಾರಿ ಕೂಡ ಇದೆ. ಪೌರಾಯುಕ್ತರಿಗೆ ಪೌರಾಡಳಿತ ಇಲಾಖೆಯ ಬಗ್ಗೆ ಸೂಕ್ತ ಜ್ಞಾನದ ಕೊರತೆ ಇದ್ದು ಅವರು ಅವರ ಮಾತೃ ಇಲಾಖೆಯಾಗಿರುವ ಶಿಕ್ಷಣ ಇಲಾಖೆಗೆ ಮರಳುವುದು ಉತ್ತಮ. ಉಡುಪಿ ನಗರಸಭೆಗೆ ಸೂಕ್ತವಾದ ಕರ್ನಾಟಕ ಪೌರಾಡಳೀತ ಸೇವೆ ದರ್ಜೆಯ ಅಧಿಕಾರಿಯನ್ನು ಸರಕಾರ ಒದಗಿಸ ಬೇಕು ಎಂಧು ಆಗ್ರಹಿಸಿದರು.
ಈಗಾಗಲೇ ರಾಜ್ಯದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಶಿಕ್ಷಣ ಇಲಾಖೆಯಿಂದ ಸೇವೆಯಿಂದ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮರಳೀ ಮಾತೃ ಇಲಾಖೆಗೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದ್ದು ಪೌರಾಯುಕ್ತ ಮಂಜುನಾಥಯ್ಯ ಅವರನ್ನು ಕೂಡ ಮಾತೃ ಇಲಾಖೆಗೆ ತರುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಮುಖ್ಯಮಂತ್ರಿಗಳೂ ಮತ್ತು ಶಿಕ್ಷಣ ಸಚಿವರಿಗೆ ಕಾರ್ಡ್ ಚಳುವಳಿ ಕೂಡ ನಡೆಸಲಾಗುವುದು ಎಂದರು. ಅಲ್ಲದೆ ಅಕ್ಟೋಬರ್ 6 ರಂದು ಜಿಲ್ಲಾ ಬಿಜೆಪಿ ಕಚೇರಿಯಿಂದ ನಗರಸಭೆಯ ವರೆಗೆ ಪಾದಯಾತ್ರೆ ನಡೆಸಿ ನಗರಸಭಾಧ್ಯಕ್ಷರಿಗೆ ಮನವಿ ನೀಡಲಾಗುವುದು ಎಂದರು.