ಅಕ್ರಮ ಕೊಳವೆ ಬಾವಿ ಕೊರೆದರೆ ಕ್ರಿಮಿನಲ್ ಕೇಸು: ಡಿಸಿ ಸೂಚನೆ
ಮ0ಗಳೂರು : ಅಂತರ್ಜಾಲ ಮಟ್ಟದ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸಲು ಹಾಗೂ ಮುಂದಿನ ದಿನಗಳಲ್ಲಿ ಉಂಟಾಗುವ ನೀರಿನ ಸಮಸ್ಯೆಗಳ ನಿವಾರಣೆಗಾಗಿ ಹೊಸ ಕೊಳವೆ ಬಾವಿಗಳನ್ನು ಕೊರೆಯುದನ್ನು ನಿಷೇಧಿಸಿ ಸರಕಾರವು ಆದೇಶಿಸಿದೆ.
ಆದರೆ ಸರ್ಕಾರದ ವಿವಿಧ ಇಲಾಖೆ/ ನಿಗಮ/ಸಂಸ್ಥೆಗಳಿಂದ ಅನುಮೋದನೆಗೊಂಡ ಕುಡಿಯುವ ನೀರಿನ ಉದ್ದೇಶದ ಕಾಮಗಾರಿಗಳಿಗಾಗಿ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಈ ಆದೇಶದಿಂದ ವಿನಾಯಿತಿ ನೀಡಿ ಅನುಮತಿ ನೀಡಲಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಯುದನ್ನು ನಿಷೇದಿಸಿ ಆದೇಶ ಮಾಡಿದ್ದರೂ ಕೂಡಾ ಆದೇಶ ಉಲ್ಲಂಘಿಸಿ ಕೊಳವೆ ಬಾವಿ ಕೊರೆಯುವ ಪ್ರಕರಣಗಳು ಕಂಡು ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದೆ.
ಯಾವುದೇ ಸರಕಾರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಹಾಗೂ ಪಾಲಿಸದಿದ್ದಲ್ಲಿ ಅಂತಹವರ ವಿರುದ್ಧ ಐಪಿಸಿ ಕಲಂಗಳಡಿ ಕ್ರಮ ಕೈಗೊಳ್ಳಲು ಅವಕಾಶ ವಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಆದೇಶವನ್ನು ಉಲ್ಲಂಘಿಸಿ, ಅಕ್ರಮ ಕೊಳವೆ ಬಾವಿ ಕೊರೆಯುತ್ತಿರುವವರ ವಿರುದ್ಧ ಐಪಿಸಿ ಅಧಿನಿಯಮದಂತೆ ಸೂಕ್ತ ಪ್ರಕರಣ ದಾಖಲಿಸಬೇಕು. ಅಕ್ರಮ ಕೊಳವೆ ಬಾವಿ ಕೊರೆಯುತ್ತಿರುವ ಏಜೆನ್ಸಿ ವಿರುದ್ಧವೂ ಸೂಕ್ತ ಪ್ರಕರಣ ದಾಖಲಿಸಿ, ಸಲಕರಣೆಗಳನ್ನು ಜಪ್ತಿ ಮಾಡಿ, ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.