ಅಕ್ರಮ ಜಾನುವಾರು ಸಾಗಾಟ ವಾಹನ ಅಪಘಾತ: ನದಿಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳು!
ಕುಂದಾಪುರ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಾರೊಂದು ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಕಾರನ್ನು ರಸ್ತೆ ಮಧ್ಯದಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಮ್ಮಾಡಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ.
ಕಾರಿನಿಂದ ನದಿಗೆ ಹಾರಿ ಆರೋಪಿಗಳು ತಪ್ಪಿಕೊಳ್ಳಲು ಯತ್ನಿಸಿದ್ದು ಇವರ ಪೈಕಿ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ
ಬಂಧಿತ ಆರೋಪಿಗಳನ್ನು ಭಟ್ಕಳ ಗುಲ್ಮಿ ನಿವಾಸಿ ಮೊಹಮ್ಮದ್ ಅಬೀದ್ (18), ಮೂಡುಗೋಪಾಡಿ ನಿವಾಸಿ ಮೊಹಮ್ಮದ್ ಅಬಾನ್ @ ಕಾಕಿ ಮಿಂಡಾ (19) ಮತ್ತು ಗುಲ್ವಾಡಿ ನಿವಾಸಿ ಮೊಹಮ್ಮದ್ ಶಿನಾನ್ @ ಚಿನ್ನು (19) ಎಂದು ಗುರುತಿಸಲಾಗಿದೆ. ಇನ್ನೋರ್ವ ತೌಹಿದ್ ನದಿಯಲ್ಲಿ ಈಜಿಕೊಂಡು ಪರಾರಿಯಾಗಿರುತ್ತಾನೆ.
ಬಂಟ್ವಾಡಿಯಿಂದ ಆಲೂರು ಕಡೆಗೆ ಚಲಿಸುತ್ತಿದ್ದ ಪಿಕಪ್ ವಾಹನಕ್ಕೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಅಕ್ರಮವಾಗಿ ಗಂಡು ಕರುವೊಂದನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಅಫಘಾತದಿಂದ ಹೆದರಿದ ಆರೋಪಿಗಳು ಕಾರನ್ನು ಮಧ್ಯ ರಸ್ತೆಯಲ್ಲಿಯೇ ಬಿಟ್ಟು ಸೌಪರ್ಣಿಕಾ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಸ್ಥಳೀಯರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.