ಅಕ್ರಮ ಜೂಜಾಟ ಅಡ್ಡೆಗೆ ದಾಳಿ: 12 ಮಂದಿ ಸೆರೆ
ಮಂಗಳೂರು: ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ – ಬಾಹರ್ ಎಂಬ ಜೂಜಾಟವಾಡುತ್ತಿದ್ದ 12 ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಕೊಣಾಜೆ ನಿವಾಸಿಗಳಾದ ಗಣೇಶ್ (38), ತಿಲಕ್ (28), ಪ್ರಸಾದ್ (38), ಜಯರಾಜ್ (26), ಲೋಕೇಸ್ (32), ಕೇಶವ (27), ದ್ರಹಾಸ ದಾಸ್ (26), ನವೀನ್ ಕುಮಾರ್ (26), ರೋಹಿತ್ (27), ರಂಜಿತ್ (29), ಶರತ್ ರಾಜ್ (25) ಎಂದು ಗುರುತಿಸಲಾಗಿದೆ.
ಭಾನುವಾರ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ 12 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ನಗದು ಹಣ ರೂ. 22,485/- ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂಜಾಟವಾಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.