ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜಾಗೆ ಹಲ್ಲೆ
ಮಂಗಳೂರು: ಪಾವೂರು ಉಳಿಯ ಸಹಿತ ನೇತ್ರಾವದಿ ನದಿ ತೀರದ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದ ಮಂಗಳೂರು ಪ್ರದೇಶ ಕೆಥೋಲಿಕ್ ಸಭಾದ ಅಧ್ಯಕ್ಷ ಆಲಿನ್ ಜೆರೋಮ್ ಡಿಸೋಜ ಅವರ ಮೇಲೆ ಶನಿವಾರ ಹಲ್ಲೆ ನಡೆದಿರುವುದು ವರದಿಯಾಗಿದೆ.
ಗಾಯಗೊಂಡ ಆಲ್ವಿನ್ ಡಿಸೋಜಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಿನ ನಾನು ಪಾವೂರು ಉಳಿಯ ಕಡೆ ಹೋಗಿದ್ದೆ. ನನ್ನೊಂದಿಗೆ ಪತ್ರಕರ್ತೆಯೊಬ್ಬರೂ ಇದ್ದರು. ಅಪರಾಹ್ನ 3 ಗಂಟೆಗೆ ನಾನು ಹರೇಕಳ-ಅಡ್ಯಾರ್ ಸೇತುವೆಯ ಬಳಿ ಇದ್ದಾಗ 10-20 ಮಂದಿಯ ತಂಡವೊಂದು ಏಕಾಏಕಿ ನನ್ನ ಮೇಲೆ ಎರಗಿದೆ. ನೀನು ನಮ್ಮ ವಿರುದ್ಧ ಹೋರಾಟ ಮಾಡುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ದುಷ್ಕರ್ಮಿಗಳು ಅಬ್ಬರಿಸಿದ್ದಾರೆ. ಬಳಿಕ ನನ್ನನ್ನು ದೂಡಿ ಹಾಕಿ ಕಾಲಿನಿಂದ ಥುಳಿದಿದ್ದಾರೆ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತೆ ನನ್ನ ರಕ್ಷಣೆಗೆ ಓಡಿ ಬಂದುದನ್ನು ಕಂಡ ಆರೋಪಿಗಳು ತಕ್ಷಣ ಪರಾರಿಯಾಗಿದ್ದಾರೆ. ಅವರನ್ನು ಕಂಡಲ್ಲಿ ನಾನು ಗುರುತು ಹಿಡಿಯಬಲ್ಲೆ ಎಂದು ಆಲ್ವಿನ್ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಆಸ್ಪತ್ರೆಗೆ ತೆರಳಿ ಆಲ್ವಿನ್ ಡಿಸೋಜರ ಆರೋಗ್ಯ ವಿಚಾರಿಸಿದ್ದಾರೆ.
ಹಲ್ಲೆ ಕೃತ್ಯವನ್ನು ಖಂಡಿಸಿರುವ ಸ್ಪೀಕರ್ ಯು.ಟಿ.ಖಾದರ್ ಪೊಲೀಸರು ತಕ್ಷಣ ಹಲ್ಲೆಗೈದ ಅಕ್ರಮ ಮರಳು ದಂಧೆಕೋರರನ್ನು ಬಂಧಿಸಬೇಕು ಮತ್ತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.