Home Mangalorean News Kannada News ಅಕ್ರಮ ಮರಳು ತಡೆಗೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಅಕ್ರಮ ಮರಳು ತಡೆಗೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಅಕ್ರಮ ಮರಳು ತಡೆಗೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್‍ಗಳನ್ನು ಮತ್ತು ಈ ಸಂಬಂಧ ಸಂಗ್ರಹಿಸಿಟ್ಟಿರುವ ಮೂಲ ಸೌಕರ್ಯಗಳನ್ನು ತಕ್ಷಣವೇ ತೆರವುಗೊಳಿಸಲು ಪೊಲೀಸರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಅಕ್ರಮಗಳನ್ನು ತಡೆಯಲು ಶೆಡ್‍ಗಳನ್ನು ಮುಟ್ಟುಗೋಲು ಹಾಕುವ ಆದೇಶ ಹೊರಡಿಸಲಾಗಿದ್ದು, ಕಾರ್ಯಾಚರಣೆಗೆ ಸಮಯಮಿತಿಯನ್ನು ನಿಗದಿಪಡಿಸಲಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರುಗಳಲ್ಲಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಿಯಂತ್ರಿಸಲು ಕೈಗೊಳ್ಳಬೇಕಾದ ನಡೆದ ಸಭೆಯಲ್ಲಿ ದೋಣಿಗಳನ್ನು ಹಾಗೂ ಡ್ರೆಜ್ಜಿಂಗ್ ಮೆಷಿನ್‍ಗಳನ್ನು, ಕ್ರೇನ್ ಉಪಯೋಗಿಸಿ ಜಪ್ತಿ ಮಾಡಲು ಇಲಾಖಾ ಸಮನ್ವಯ ಮಾಡಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದರು.
ಅಕ್ರಮ ಮರಳುಗಾರಿಕೆ ನಿರ್ಬಂಧಿಸಲು ಜಿಲ್ಲೆಯಲ್ಲಿ CRPC ಸೆಕ್ಷನ್ 144 ರ ಅಡಿಯಲ್ಲಿ ಆದೇಶ ಹೊರಡಿಸಿ ಅಕ್ರಮ ತಡೆಯಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.

ಇದಲ್ಲದೆ CRPC ಸೆಕ್ಷನ್ 110 ಅಡಿಯಲ್ಲಿ ಹಾಗೂ 107ರಡಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ದ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಪಟ್ಟಾ ಜಮೀನಿನಲ್ಲೂ ಅಕ್ರಮ ಮರಳು ಸಂಗ್ರಹಕ್ಕೆ ಅವಕಾಶವಿಲ್ಲ; ಸಂಗ್ರಹಿಸಿದವರಿಗೆ ನೋಟೀಸು ನೀಡಿ; ಕಾನೂನು ಪಾಲಿಸಿ; ವ್ಯವಸ್ಥೆಯು ಅಪಹಾಸ್ಯಕ್ಕೀಡಾಗದಂತೆ ಪಕ್ಕಾ ಕಾನೂನು ಪರಿಪಾಲನೆಯಾಗಲಿ ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.

ಹೊರರಾಜ್ಯದಿಂದ ಮರಳು ಬರುವ ಸಂದರ್ಭದಲ್ಲಿ ಪರ್ಮಿಟ್ ಪರಿಶೀಲಿಸಿ; ಒಂದು ವಾರದೊಳಗಾಗಿ ಅಕ್ರಮ ಮರಳುಗಾರಿಕೆ ತಡೆಯಲು ಯುದ್ಧೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಬಾಲಕೃಷ್ಣ ಅವರು, ಪೊಲೀಸ್ ಇಲಾಖೆ ಸರ್ವ ಸಹಕಾರ ನೀಡಲು ಬದ್ಧವಾಗಿದೆ ಎಂದರು. ಸ್ಕ್ವಾಡ್ ರಚಿಸಲಾಗಿದ್ದು ಇವರು ತಮ್ಮ ಕರ್ತವ್ಯ ನಿರ್ವಹಣೆ ಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಂದಾಪುರದಲ್ಲಿ ಮರಳು ಮಾಫಿಯಾ ತಡೆಗೆ ಪ್ರತ್ಯೇಕವಾಗಿ ಪೊಲೀಸ್ ತಂಡವನ್ನೂ ರಚಿಸಲಾಗಿದೆ ಎಂದು ಎಸ್ ಪಿ ಹೇಳಿದರು.

ಆರ್ ಟಿ ಒ ದವರು ಇನ್ನು ಮುಂದೆ ಇಂತಹ ಲಾರಿಗಳಿಗೆ ದಂಡ ವಿಧಿಸಿ ಬಿಡಲು ಅವಕಾಶವಿಲ್ಲ; ಇಂತಹವರ ಪರ್ಮಿಟ್ ರದ್ದು ಮಾಡಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು

ಪಿಡಬ್ಲ್ಯುಡಿ, ಕೆಆರ್‍ಐಡಿಎಲ್, ನಿರ್ಮಿತಿಯವರು ಮರಳುಗಾರಿಕೆ ತಡೆಗೆ ಎಲ್ಲ ಬೆಂಬಲ ನೀಡಲಿದ್ದು, ಜಿಲ್ಲೆಯ ಜನರಿಗೆ ಮರಳು ಲಭ್ಯವಾಗಿಸಲು ಗಣಿ ಇಲಾಖೆ, ಪಿಡಬ್ಲ್ಯುಡಿ, ಕೆಆರ್‍ಐಡಿಎಲ್ ಸಜ್ಜಾಗಿದೆ. ಜಿಲ್ಲೆಯಲ್ಲಿ ಒಟ್ಟು 60,000 ಟನ್ ಮರಳು ನಿರ್ಮಾಣ ಕಾಮಗಾರಿಗಳಿಗೆ ಲಭ್ಯವಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ನಂ.2ನೇ ಉಪವಿಭಾಗ, ಬೊಬ್ಬರ್ಯಕಟ್ಟೆ ಬಳಿ, ಕುಂದಾಪುರ (9448428545), ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, (9008599623), ಮತ್ತು ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ರಜತಾದ್ರಿ, ಮಣಿಪಾಲ (9449534792), ಇವರಿಗೆ ಮರಳಿನ ಬೇಡಿಕೆ ಸಲ್ಲಿಸಬಹುದು.

ಕಾನೂನುಪ್ರಕಾರ ಮರಳುಗಾರಿಕೆ ನಡೆಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸುವಂತೆ, ಚೆಕ್ ಪೋಸ್ಟ್‍ಗಳಲ್ಲಿರುವ ಕ್ಯಾಮರಾಗಳಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ದಾಖಲಾಗುವಂತೆ ನೋಡಿಕೊಳ್ಳಿ ಎಂದ ಜಿಲ್ಲಾಧಿಕಾರಿ, ಇಲಾಖೆಯಲ್ಲಿ ಲಭ್ಯವಿರುವ ಮರಳಿನ ಗುಣಮಟ್ಟ ಉತ್ತಮವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತರಾದ ಶಿಲ್ಪಾ ನಾಗ್, ಎಲ್ಲ ತಹಸೀಲ್ದಾರ್‍ಗಳು, ಎಸಿಎಫ್ ಅಚ್ಚಪ್ಪ, ಗಣಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version