ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ DYFI ಪ್ರತಿಭಟನೆ
ಮಂಗಳೂರು: ಸ್ಕಿಲ್ ಗೇಮ್, ಜುಗಾರಿ ಅಡ್ಡೆ, ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ DYFI ದ ಕ ಜಿಲ್ಲಾಸಮಿತಿ ವತಿಯಿಂದ ಮಂಗಳೂರು ನಗರದಲ್ಲಿ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತಾಡಿದ DYFI ಜಿಲ್ಲಾಧ್ಯಕ್ಷ ಕಾರ್ಪೋರೇಟರ್ ದಯಾನಂದ ಶೆಟ್ಟಿ ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಸ್ಕಿಲ್ ಗೇಮ್ ಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿದೆ. ನಗರಪಾಲಿಕೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಇಂತಹ ಜೂಜುಕೇಂದ್ರಗಳು ರಾಜರೋಷವಾಗಿ ನಡೆಯಲು ಪೋಲಿಸರ ಶಾಮೀಲಾತಿಯೇ ಕಾರಣ. ನಗರದ ಶಾಸಕರ ಹಿಂಬಾಲಕರು, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸ್ಕಿಲ್ ಗೇಮ್ , ಜುಗಾರಿ ಅಡ್ಡೆಗಳನ್ನು ನಡೆಸುತ್ತಿದ್ದಾರೆ. ಶಾಸಕರುಗಳ, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬೆಂಬಲವೇ ಸ್ಕಿಲ್ ಗೇಮ್, ಇಸ್ಪೀಟು ಅಡ್ಡೆಗಳು ಗಲ್ಲಿ ಗಲ್ಲಿಗಳಲ್ಲಿ ವ್ಯವಹಾರ ನಡೆಸಲು ಕಾರಣ. ಬಡವರ, ಜನಸಾಮಾನ್ಯರ ರಕ್ತ ಹೀರುವ ಇಂತಹ ಮಾಫಿಯಾಗಳಿಗೆ ರಾಜಕೀಯ ಶ್ರೀರಕ್ಷೆ ದೊರಕುತ್ತಿರುವುದು ದುರಂತ ಎಂದು ಆಪಾದಿಸಿದರು.
ನಂತರ ಮಾತಾಡಿದ DYFI ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸ್ಕಿಲ್ ಗೇಮ್ ನಡೆಸುತ್ತಿರುವ ಬಹುತೇಕರು ಯುವ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂತಹ ಮಾಫಿಯಾ ಪ್ರತಿನಿಧಿಗಳ ತಂಡ ಜೊತೆಯಲ್ಲಿಟ್ಟುಕೊಂಡು ಮಿಥುನ್ ರೈ ಯುವ ಕಾಂಗ್ರೆಸ್ ಕಟ್ಟಲು ಹೊರಟಿರುವುದು ವಿಪರ್ಯಾಸ ಎಂದರು. ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಪೊಲಿಸ್ ಠಾಣೆಯ ಮುಂಭಾಗಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಹೋರಾಟವನ್ನು ಮುಂದುವರಿಸುವುದಾಗಿ ಎಚ್ಚರಿಸಿದರು.
DYFI ಜಿಲ್ಲಾಕಾರ್ಯದರ್ಶಿ ಸಂತೋಷ್ ಬಜಾಲ್ ಮಾತಾಡುತ್ತ ನಗರದ ಕೇಂದ್ರ ಭಾಗದ ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ರಾಜಾರೋಷವಾಗಿ ನಡೆಯುತ್ತಿದೆ. ಪೋಲಿಸರ ಕೃಪಾಕಟಾಕ್ಷವಿಲ್ಲದೆ ಇದು ಅಸಾಧ್ಯ. ಸಾರ್ವಜನಿಕರು ಇಂತಹ ಅಕ್ರಮಗಳ ವಿರುದ್ದ ಠಾಣಾಧಿಕಾರಿಗಳಿಗೆ ದೂರು ನೀಡಿದರೆ ಹತ್ತೇ ನಿಮಿಷದಲ್ಲಿ ಮಾಫಿಯಾಗಳಿಗೆ ದೂರುದಾರರ ವಿವರವನ್ನು ದಾಟಿಸಲಾಗುತ್ತಿದೆ. ದೂರುದಾರರು ಇದರಿಂದ ಜೀವಭಯದಿಂದ ಬದುಕುವಂತಾಗಿದೆ. ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಗಳಿಸಿರುವ ಕಮೀಷನರ್ ಚಂದ್ರಶೇಖರ್ ಹೆಸರನ್ನು ಕೆಲ ಅಧಿಕಾರಿಗಳು ದುರುಪಯೋಗ ಪಡಿಸಿರುವ ಆರೋಪಗಳು ಕೇಳಿಬಂದಿವೆ. ಕಮೀಷನರ್ ಈ ನಿಟ್ಟಿನಲ್ಲಿ ತಕ್ಷಣ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಪೋಲಿಸ್ ಇಲಾಖೆಯ ನೈತಿಕತೆಯನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿದರು. SFI ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಸಿಐಟಿ ಯು ಮುಖಂಡ ಸಂತೋಷ್ ಶಕ್ತಿನಗರ ಮಾತಾಡಿದರು.
ಹೋರಾಟದ ನೇತೃತ್ವವನ್ನು ಸಾದಿಕ್ ಕಣ್ಣೂರು, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಮನೋಜ್ ವಾಮಂಜೂರು, ಶ್ರೀನಾಥ್ ಕುಲಾಲ್, ನೌಷದ್ ಬೆಂಗ್ರ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಮಯೂರಿ ಬೋಳಾರ, ತಸ್ರೀಫ್ ಮೂಡಬಿದ್ರೆ ಮತ್ತಿತರರು ವಹಿಸಿದ್ದರು. ಪ್ರತಿಭಟನೆಯ ನಂತರ ನಗರ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.