ಅಕ್ರಮ ವಾಸ: ಮಂಗಳೂರು ವಿಮಾನ ನಿಲ್ದಾಣದದಲ್ಲಿ ಬಾಂಗ್ಲಾ ಮೂಲದ ವ್ಯಕ್ತಿಯ ಬಂಧನ
ಮಂಗಳೂರು: ಅಕ್ರಮವಾಗಿ ಭಾರತಕ್ಕೆ ಬಂದು ಉಳಿದುಕೊಂಡಿದ್ದಲ್ಲದೆ, ಅಕ್ರಮ ಪಾಸ್ಪೋರ್ಟ್ ಮಾಡಿಕೊಂಡು ದುಬೈಗೆ ಹಾರಲು ಯತ್ನಿಸಿದ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಾಂಗ್ಲಾದೇಶ ಮೂಲದ ನಿವಾಸಿಯನ್ನು ಮಾಣಿಕ್ ಹುಸೈನ್ (26) ಎಂದು ಗುರುತಿಸಲಾಗಿದೆ. ಈತ 2017ರಲ್ಲಿ ಪಶ್ಚಿಮ ಬಂಗಾಳ ಗಡಿಯ ಮೂಲಕ ಬಾಂಗ್ಲಾದಿಂದ ಭಾರತಕ್ಕೆ ಬಂದಿದ್ದ. ಆನಂತರ, ತಮಿಳುನಾಡಿನ ಚೆನ್ನೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಪರಿಚಯದ ವ್ಯಕ್ತಿ ಮೂಲಕ ನಕಲಿ ಆಧಾರ್ ಇನ್ನಿತರ ಐಡಿಗಳನ್ನು ಮಾಡಿ, ನಕಲಿ ವಿಳಾಸ ಮೂಲಕ ಭಾರತದ ಪಾಸ್ಪೋರ್ಟ್ ರೆಡಿ ಮಾಡಿಸಿದ್ದ. ಇದೀಗ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಹಾರಲು ಯತ್ನಿಸುತ್ತಿದ್ದಾಗಲೇ ಎಮಿಗ್ರೇಷನ್ ಅಧಿಕಾರಿಗಳು ಸಂಶಯದಲ್ಲಿ ತಪಾಸಣೆ ನಡೆಸಿದ್ದು ವಶಕ್ಕೆ ಪಡೆದಿದ್ದಾರೆ.
ಉಡುಪಿಯಲ್ಲಿ ಸಿದ್ಧಪಡಿಸಿದ ಪಾಸ್ಪೋರ್ಟ್ ನಲ್ಲಿ ತನ್ನ ಹೆಸರನ್ನು ಮಹಮ್ಮದ್ ಮಾಣಿಕ್ ಎಂದು ಬದಲಾಯಿಸಿದ್ದ. ಬಾಂಗ್ಲಾ ಮೂಲದ ಈ ವ್ಯಕ್ತಿಯ ಜೊತೆಗೆ ಇನ್ನೂ 5 ಮಂದಿ ಉಡುಪಿಗೆ ಬಂದಿದ್ದಾರೆ ಎನ್ನಲಾಗುತ್ತಿದ್ದು ಆರೋಪಿಯನ್ನು ಬಜಪೆ ಪೋಲೀಸರಿಗೆ ಒಪ್ಪಿಸಲಾಗಿದೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶಿ ಅಕ್ರಮ ವಲಸಿಗನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ನಕಲಿ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ಮಾಣಿಕ್ ಹುಸೇನ್ ಎಂದು ಗುರುತಿಸಲಾಗಿದೆ.