ಅಕ್ರಮ 5 ಕೆಜಿ ಗಾಂಜಾದೊಂದಿಗೆ ಇಬ್ಬರ ಬಂಧನ

Spread the love

ಅಕ್ರಮ 5 ಕೆಜಿ ಗಾಂಜಾದೊಂದಿಗೆ ಇಬ್ಬರ ಬಂಧನ

ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಅಪರಾಧ ಪತ್ತೆ ದಳದ ಪೋಲಿಸರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತರನ್ನು ಬಂಟ್ವಾಳದ ಅಂಸಾದ್ ಸಿ ಎಚ್ (27) ಕಾಸರಗೋಡಿನ ಉದಯ್ ಕುಮಾರ್ ರೈ (30) ಎಂದು ಗುರುತಿಸಲಾಗಿದೆ.

ಬಂಧಿತರಿಂದ 5 ಕೆಜಿ ಗಾಂಜಾ ಮತ್ತು 3 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಗಾಂಜಾ ಹಾಗೂ ಮೊಬೈಲ್ ಫೋನ್ ಗಳ ಒಟ್ಟು ಮೌಲ್ಯ ರೂ. 1,66,000/- ಆಗಿರುತ್ತದೆ. ಈ ಗಾಂಜಾವನ್ನು ಆರೋಪಿಗಳು ಕೇರಳ ಇಡುಕ್ಕಿ ಜಿಲ್ಲೆಯಿಂದ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿರುವುದಾಗಿದೆ. ಆರೋಪಿಗಳ ಪೈಕಿ ಉದಯ ಕುಮಾರ್ ರೈ ಎಂಬಾತನ ವಿರುದ್ಧ  ಈ ಹಿಂದೆ ಪಣಂಬೂರು, ಮಂಗಳೂರು ಪೂರ್ವ, ಬರ್ಕೆ, ಬಜಪೆ ಪೊಲೀಸ್ ಠಾಣೆಗಳಲ್ಲಿ ಹಾಗೂ ಕೇರಳ ರಾಜ್ಯದ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ  ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ     ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಬಂಧಿತರು ಕೇರಳದ ಇಡುಕ್ಕಿ ಜಿಲ್ಲೆಯಿಂದ ಗಾಂಜಾ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ಹೇಳಲಾಗಿದ್ದು, ಬಂಧಿತರನ್ನು ಉರ್ವಾ ಪೋಲಿಸ್ ಠಾಣಾ ವ್ಯಾಪ್ತಿಯ ಬಿಜೈ ಕಾಪಿಕಾಡ್ ರಸ್ತೆಯ ಬಳಿ ಬಂಧಿಸಲಾಗಿದೆ.


Spread the love