ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ

Spread the love

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ
 
ಉಜಿರೆ: ಭಾರತದ ಆದ್ಯಾತ್ಮಿಕತೆ, ಸಂಸ್ಕøತಿ-ಸಂಸ್ಕಾರ ಹಾಗೂ ಕುಟುಂಬ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮನೆಯಲ್ಲಿ ಸ್ವರ್ಗ-ನರಕ ಎರಡೂ ಇದೆ. ಗಂಡ-ಹೆಂಡತಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಅನ್ಯೋನ್ಯತೆಯಿಂದ ಸೌಹಾರ್ದಯುತ ಜೀವನ ನಡೆಸಿದರೆ ಮನೆಯಲ್ಲೆ ಸ್ವರ್ಗ ಸುಖ ಅನುಭವಿಸಬಹುದು. ಆಗ ಮನೆಯೇ ಮಂತ್ರಾಲಯವಾಗುತ್ತದೆ. ಮನಸೇ ದೇವಾಲಯವಾಗುತ್ತದೆ. ಪರಸ್ಪರ ಅನ್ಯೋನ್ಯತೆ, ಹೊದಾಣಿಕೆ ಹಾಗೂ ಪ್ರೀತಿ-ವಿಶ್ವಾಸ ಇಲ್ಲವಾದಲ್ಲಿ ಮನೆಯೇ ನರಕ ಸದೃಶವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಡು ಮುಟ್ಟದ ಸೊಪ್ಪಿಲ್ಲ, ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವಾ ಕ್ಷೇತ್ರವಿಲ್ಲ ಎಂದು ಹೇಳಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನವಜೀವನ ಸಮಿತಿ ಆಶ್ರಯದಲ್ಲಿ ಹೆಗ್ಗಡೆಯವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳು ಹಾಗೂ ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ. ಕಿರು ಆರ್ಥಿಕ ಯೋಜನೆ ಮೂಲಕ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶೇಕಡಾ ನೂರು ಸಾಲ ಮರು ಪಾವತಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸೋಲು, ನಷ್ಟ, ಸಹವಾಸ ದೋಷ, ಆರೋಗ್ಯ ಸಮಸ್ಯೆ ಇತ್ಯಾದಿ ಹತ್ತು-ಹಲವು ಕಾರಣಗಳಿಂದ ಜನರು ಜಾತಿ-ಮತ, ಲಿಂಗ, ವಯಸ್ಸಿನ ಭೇದವಿಲ್ಲದೆ ಮದ್ಯಪಾನ ಚಟಕ್ಕೆ ಬಲಿಯಾಗುತ್ತಾರೆ.

ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಸಮಾನವಾಗಿ ಎಚ್ಚರಿಕೆ, ಮಾರ್ಗದರ್ಶನ ನೀಡಬೇಕು. ಎಲ್ಲಾ ಗ್ರಾಮಗಳು ವ್ಯಸನ ಮುಕ್ತ ಗ್ರಾಮಗಳಾದಾಗ ಮಾತ್ರ ಮಹಿಳೆಯರು ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಅವರಿಗೆ ನಾವು ನ್ಯಾಯ ಒದಗಿಸಿದಂತಾಗುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.

ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ದುಶ್ಚಟಗಳ ದಮನ ಮಾಡುವ ಸಂಕಲ್ಪ ಶಕ್ತಿ ಮತ್ತು ಆತ್ಮ ಬಲ ಹೊಂದಿರಬೇಕು. ಜನಜಾಗೃತಿ ವೇದಿಕೆಯ ನಿರಂತರ ಪರಿಶ್ರಮ-ಪ್ರಯತ್ನದಿಂದ ವ್ಯಸನ ಮುಕ್ತರಾಗಿ ಅನೇಕ ಕುಟುಂಬಗಳು ಇಂದು ಚೇತರಿಸಿ ನವಜೀವನ ನಡೆಸುತ್ತಿವೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಹೆಗ್ಗಡೆಯವರ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ವ್ಯಸನಮುಕ್ತ ಭಾರತದ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನಮುಕ್ತರು ಕಾಯಾ, ವಾಚಾ, ಮನಸಾ, ಪರಿಶುದ್ಧರಾಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಆಶೀರ್ವಾದ ಪಡೆದು ಪವಿತ್ರಾತ್ಮರಾಗಿದ್ದೀರಿ. ಮುಂದೆ ದೃಢ ಸಂಕಲ್ಪದಿಂದ ಅಂತರಂಗ-ಬಹಿರಂಗ ಪರಿಶುದ್ಧರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಕುಟುಂಬದ ಸದಸ್ಯರೆಲ್ಲರೂ ವ್ಯಸನ ಮುಕ್ತರನ್ನು ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನೋಡಿಕೊಳ್ಳಬೇಕು. ಮನೆ ಮಂದಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಜಾಲ ಹೆಚ್ಚಾಗುತ್ತಿದೆ. ಇದನ್ನು ಸರ್ಕಾರ ತಡೆಗಟ್ಟಬೇಕು ಎಂದು ಹೆಗ್ಗಡೆಯವರು ಹೇಳಿದರು.

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಂತೆ ತಡೆಯಲು ಶಾಲಾ-ಕಾಲೇಜುಗಳಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮದ ಮೂಲಕ ಅರಿವು, ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾೈಸ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಧನ್ಯವಾದವಿತ್ತರು. ಭಾಸ್ಕರ್ ಎನ್. ಮತ್ತು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.


Spread the love